ಕೌಶಲ್ಯಾಭಿವೃದ್ಧಿ, ಸೃಜನಶೀಲತೆಗೆ ಉತ್ತೇಜನ ನೀಡಿದ ಸ್ಪರ್ಧೆಗಳು
ಹೊಸಪೇಟೆ/ವಿಜಯನಗರ (ಜಾಗೃತಿ ಬೆಳಕು)
ತ್ವಯ್ಬಾ ಫೌಂಡೇಶನ್ ವತಿಯಿಂದ ಆಯೋಜಿಸಲಾದ ‘ತಸ್ನೀಮೆ ತ್ವಯ್ಬಾ ಸ್ಟೂಡೆಂಟ್ಸ್ ಆರ್ಟ್ ಫೆಸ್ಟ್ 0.3’ ಕಲಾ ಉತ್ಸವವು ಅಕ್ಟೋಬರ್ 9 ಮತ್ತು 10ರಂದು ಹೊಸಪೇಟೆಯಲ್ಲಿ ನಡೆಯಿತು.ಮೌಲಾನಾ ಅಬ್ದುಸ್ಸಮದ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಹಝ್ರತ್ ಸಯ್ಯಿದ್ ಶಾ ಖಾದ್ರಿ (ರ.ಅ.) ದರ್ಗಾದಲ್ಲಿ ಝಿಯಾರತ್ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುವುದು, ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಅಬೂಬಕರ್ ಸಿದ್ದೀಕ್ ಸಖಾಫಿ ಅಲ್ಹಿಕಮಿ ಅಲ್ಅಸ್ಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗಣ್ಯ ಅತಿಥಿಗಳನ್ನು ಗೌರವಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಮುಫ್ತಿ ಖಲೀಲ್ ಹಝ್ರತ್ ಸ್ವಾಗತ ಭಾಷಣ ಮಾಡಿದರು.ಸಫ್ವಾನ್ ಹನೀಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ಕಲಾ ಉತ್ಸವವು ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡಿತು.
