ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರ ರಕ್ಷಣೆ
ದೇವಸ್ಥಾನಕ್ಕೆ ತೆರಳುವ ವೇಳೆ ದಾರಿ ತಪ್ಪಿದ ಮಕ್ಕಳು; ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರ
ವರದಿ : ಮಹಮ್ಮದ್ ಗೌಸ್ ( ಜಾಗೃತಿ ಬೆಳಕು ನ್ಯೂಸ್ )
ಹೊಸಪೇಟೆ/ವಿಜಯನಗರ : ಜಿಲ್ಲೆಯ ರೈಲ್ವೆ ನಿಲ್ದಾಣದ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಅಕ್ಕಪಡೆ ತಂಡವು ರಕ್ಷಿಸಿ, ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಿದ ಘಟನೆ ಸೋಮವಾರ ನಡೆದಿದೆ.
ರೈಲ್ವೆ ಪೊಲೀಸ್ ಠಾಣೆಯಿಂದ ರೈಲ್ವೆ ನಿಲ್ದಾಣದ ಬಳಿ ಮೂವರು ಅಪ್ರಾಪ್ತ ಬಾಲಕರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಬಂದಿತ್ತು. ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಅಕ್ಕಪಡೆ ತಂಡ ಸ್ಥಳಕ್ಕೆ ತೆರಳಿ ಮಕ್ಕಳನ್ನು ಸುರಕ್ಷಿತವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಕರೆತಂದರು.
ಅಲ್ಲಿ ಮಕ್ಕಳನ್ನು ವಿಚಾರಣೆ ನಡೆಸಿದಾಗ, ಮನೆಯಲ್ಲಿ ಯಾರಿಗೂ ತಿಳಿಸದೆ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟಿದ್ದು, ಮಾರ್ಗ ಮಧ್ಯೆ ದಾರಿ ತಪ್ಪಿ ರೈಲ್ವೆ ನಿಲ್ದಾಣದ ಬಳಿ ತಲುಪಿರುವುದಾಗಿ ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳಲ್ಲಿ ಸಂಡೂರು ತಾಲೂಕಿನ ಕುರೇಗುಪ್ಪ ಗ್ರಾಮದ ಬಸವರಾಜ್–ಹೊನ್ನೂರಮ್ಮ ದಂಪತಿಯ ಪುತ್ರ ಹಾಗೂ 8ನೇ ತರಗತಿ ವಿದ್ಯಾರ್ಥಿ ಶಂಕರ, ಗದಗ್ ಜಿಲ್ಲೆಯ ಗವಿಸಿದ್ದೇಶ್ವರ ಮಠ ವಸತಿ ನಿಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜಶೇಖರ್–ಕವಿತಾ ದಂಪತಿಯ ಪುತ್ರ ಯಶ್ವಂತ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಚಿದಾನಂದ–ನೀಲಮ್ಮ ದಂಪತಿಯ ಪುತ್ರ ಹರ್ಷ ಸೇರಿದ್ದಾರೆ.
ಬಳಿಕ ಮಕ್ಕಳ ಪೋಷಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತು. ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಆಗಮಿಸಿ ಮಕ್ಕಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ಈ ವೇಳೆ ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿಯಿಂದ ಕಾಳಜಿ ವಹಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಪೋಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ, ಈ ಸಂಬಂಧ ಪೋಷಕರಿಂದ ಲಿಖಿತ ಹೇಳಿಕೆಯನ್ನೂ ಪಡೆಯಲಾಯಿತು.
ಯಶ್ವಂತ್ ಅವರ ತಂದೆ ರಾಜಶೇಖರ್ ಅವರು ಮೂವರು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗುವುದಾಗಿ ಒಪ್ಪಿಗೆ ಸೂಚಿಸಿದರು. ಜೊತೆಗೆ, ದಿನಾಂಕ ಆಗಸ್ಟ್ 4ರಂದು ಬೆಳಿಗ್ಗೆ ಬಳ್ಳಾರಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಮಕ್ಕಳೊಂದಿಗೆ ಕಡ್ಡಾಯವಾಗಿ ಹಾಜರಾಗುವಂತೆ ಪೋಷಕರಿಗೆ ಸೂಚಿಸಲಾಯಿತು.
ಅಗತ್ಯ ಕಾನೂನು ಹಾಗೂ ರಕ್ಷಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೂವರು ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರೊಂದಿಗೆ ಮನೆಗೆ ಕಳುಹಿಸಲಾಯಿತು.
ಈ ಘಟನೆಯು ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಹಾಗೂ ಕಾಳಜಿ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
