Welcome to jagruthibelaku   Click to listen highlighted text! Welcome to jagruthibelaku
Wednesday, May 20, 2026
HomeUncategorizedತ್ಯಾಜ್ಯದಿಂದ ಆದಾಯ – ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಬೆಳಗಟ್ಟೆ ಗ್ರಾಮ ಪಂಚಾಯಿತಿಯ ಮಾದರಿ ಹೆಜ್ಜೆ

ತ್ಯಾಜ್ಯದಿಂದ ಆದಾಯ – ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಬೆಳಗಟ್ಟೆ ಗ್ರಾಮ ಪಂಚಾಯಿತಿಯ ಮಾದರಿ ಹೆಜ್ಜೆ

ಕೂಡ್ಲಿಗಿ/ವಿಜಯನಗರ, ಜಾಗೃತಿ ಬೆಳಕು ನ್ಯೂಸ್

ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬೆಳಗಟ್ಟೆ ಗ್ರಾಮ ಪಂಚಾಯಿತಿಯು “ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ”ಯಲ್ಲಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಹೊರಹೊಮ್ಮಿದ್ದು, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಮೂಲಕ ಗ್ರಾಮೀಣ ಸ್ವಚ್ಛತಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.“ಸ್ವಚ್ಛತೆ ಎಂಬುದು ಆರೋಗ್ಯಕರ ಸಮಾಜದ ಮೊದಲ ಹೆಜ್ಜೆ” ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಮ ಪಂಚಾಯಿತಿ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೈಗೊಂಡ ನಿರಂತರ ಪ್ರಯತ್ನಗಳು ಇಂದು ಗ್ರಾಮವನ್ನು ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದತ್ತ ಕೊಂಡೊಯ್ದಿವೆ.ಗ್ರಾಮದಲ್ಲಿ ಮನೆಮನೆಗೆ ತೆರಳಿ ಒಣ ಮತ್ತು ತೇವ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪ್ರತಿದಿನ ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡು ಗ್ರಾಮ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ.ಗ್ರಾಮದಲ್ಲಿ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತೇವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದ್ದು, ರೈತರು ಮತ್ತು ಸಾರ್ವಜನಿಕರಿಗೆ ವಿತರಿಸುವ ಮೂಲಕ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಮರುಬಳಕೆ ಸಾಧ್ಯವಾಗುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುತ್ತಿದೆ.ಸ್ವಚ್ಛತಾ ಕಾರ್ಯಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ವಿಶೇಷವಾಗಿದ್ದು, ಎನ್.ಆರ್.ಎಲ್.ಎಂ ಯೋಜನೆಯ “ಅಕ್ಷರ ಸಂಜೀವಿನಿ” (GPLF) ಒಕ್ಕೂಟವು ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಗ್ರಾಮಸ್ಥರಲ್ಲಿ ಕಸ ವಿಂಗಡಣೆ, ಪರಿಸರ ಸಂರಕ್ಷಣೆ ಹಾಗೂ ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.ಹನುಮಂತಪ್ಪ IEC ಸಮಾಲೋಚಕರುಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಜಿಲ್ಲಾ ಪಂಚಾಯಿತಿ, ವಿಜಯನಗರ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗಟ್ಟೆ, ಕಾಟ್ರಹಳ್ಳಿ, ನರಸಿಂಹಗಿರಿ, ಹುಲಿಕುಂಟೆ, ಸಂಕ್ಲಾಪುರ, ಅರ್ಜುನ ಚಿನ್ನನಹಳ್ಳಿ, ಯಲಿಂಗನಹಳ್ಳಿ, ಕರಡಿಹಳ್ಳಿ ಹಾಗೂ ಕೊರಚರಹಟ್ಟಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ.ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವಾಹನ ಚಾಲಕಿಯಾಗಿ ಶ್ರೀಮತಿ ಶಿಲ್ಪಾ ಕಾರ್ಯನಿರ್ವಹಿಸುತ್ತಿದ್ದು, ಕಸ ವಿಂಗಡಣೆ ಕಾರ್ಯದಲ್ಲಿ ಮಂಜಮ್ಮ ಹಾಗೂ ಶ್ರೀಮತಿ ಜ್ಯೋತೆಮ್ಮ ಅವರು ಸೇವೆ ಸಲ್ಲಿಸುತ್ತಿದ್ದಾರೆ.ಗ್ರಾಮ ಪಂಚಾಯಿತಿಯ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, “ಸ್ವಚ್ಛ ಗ್ರಾಮ – ಆರೋಗ್ಯಕರ ಗ್ರಾಮ” ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸುವತ್ತ ಬೆಳಗಟ್ಟೆ ಗ್ರಾಮ ಪಂಚಾಯಿತಿ ಮುನ್ನಡೆಯುತ್ತಿದೆ.—ಕೋಟ್ – 1*> “ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಕಾಲುವೆಗಳ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮನೆಮನೆಗೆ ಕಸ ವಿಂಗಡಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಶೌಚಾಲಯ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರ ಸಹಕಾರವೇ ಈ ಯಶಸ್ಸಿನ ಮೂಲವಾಗಿದೆ.”*– ಶ್ರೀ ಕೆ. ನರಸಪ್ಪಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯಿತಿ,ಕೂಡ್ಲಿಗಿ

ಕೋಟ್ – 2*> “ಸ್ವಚ್ಛ ಸಂಕೀರ್ಣ ಘಟಕದ ಮೂಲಕ ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿತ, ಕಸ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಗ್ರಾಮಸ್ಥರಲ್ಲಿ ಉತ್ತಮ ಅರಿವು ಮೂಡಿದ್ದು, ಇದು ಗ್ರಾಮ ಸ್ವಚ್ಛತೆಗೆ ದೊಡ್ಡ ಬಲವಾಗಿದೆ.”*– ಶ್ರೀ ಉಮೇಶ್ ಎಮ್ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯಿತಿ, ವಿಜಯನಗರಕೋಟ್

ಕೋಟ್/3 “ಗ್ರಾಮ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು, ಮಹಿಳಾ ಸಂಘಗಳು ಹಾಗೂ ಸಾರ್ವಜನಿಕರ ಸಮನ್ವಯದಿಂದ ಬೆಳಗಟ್ಟೆ ಗ್ರಾಮ ಪಂಚಾಯಿತಿ ಇಂದು ಜಿಲ್ಲೆಯ ಮಾದರಿ ಪಂಚಾಯಿತಿಯಾಗಿ ಹೊರಹೊಮ್ಮಿದೆ. ‘ತ್ಯಾಜ್ಯದಿಂದ ಆದಾಯ’ ಎಂಬ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಇತರೆ ಗ್ರಾಮ ಪಂಚಾಯಿತಿಗಳಿಗೂ ಪ್ರೇರಣೆಯಾಗಿದೆ.”*– ಶ್ರೀ ಕೆ. ತಿಮ್ಮಪ್ಪಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ವಿಜಯನಗರ

ವರದಿ : ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news
Click to listen highlighted text!