ಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ
ಬಳ್ಳಾರಿ, (ಜಾಗೃತಿ ಬೆಳಕು ನ್ಯೂಸ್ )
ಏ.17: ಕೇಂದ್ರ ಸರ್ಕಾರದ ಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹವಾದುದು ಆದರೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡುವುದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಘೋರ ಅನ್ಯಾಯ ಆಗಲಿದೆ ಎಂದು ವೀರಶೈವ ಲಿಂಗಾಯತ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.ಶುಕ್ರವಾರ ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿ ಮಹಿಳಾ ಮೀಸಲಾತಿ ವಿಷಯ ಹೊಸದೇನಲ್ಲ, ಒಂದೂವರೆ ದಶಕದ ಹಿಂದೆಯೇ ಮಾನ್ಯ ಸೋನಿಯಾ ಗಾಂಧಿಯವರ ಅವಿರತ ಶ್ರಮದ ಫಲವಾಗಿ ಮಹಿಳಾ ಮೀಸಲು ಮಸೂದೆ ಚರ್ಚೆಗೆ ಬಂತು ಎಂದು ಹೇಳಿರುವ ಅವರು, 2010ರಲ್ಲಿಯೇ ಆಗಿನ ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ಮಹಿಳೆಯರಿಗೆ ಶೇ.33ರಷ್ಟು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು, ಆದರೆ ಲೋಕಸಭೆಯಲ್ಲಿ ಒಮ್ಮತದ ಕೊರತೆ ಹಾಗೂ ಕೆಲ ಪಕ್ಷಗಳ ವಿರೋಧದಿಂದಾಗಿ ಅಂತಿಮವಾಗಿ ರದ್ದಾಯಿತು ಎಂದಿದ್ದಾರೆ.ಮಾನ್ಯ ಸೋನಿಯಾಗಾಂಧಿಯವರು ಒಂದೂವರೆ ದಶಕದ ಹಿಂದೆಯೇ ದೇಶದ ಎಲ್ಲ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲು ತರುವ ಪ್ರಯತ್ನ ಮಾಡಿದ್ದರು, ಆದರೆ ಅವರಿಗೆ ದೇಶದ ಯಾವುದೇ ಭಾಗದ ಅಥವಾ ರಾಜ್ಯಗಳ ಪ್ರಾತಿನಿಧ್ಯ ಕಸಿಯುವ ಉದ್ಧೇಶ ಇರಲಿಲ್ಲ, ಆದರೆ ಈಗ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುವ ಉದ್ಧೇಶ ಇದೆ ಎಂದಿದ್ದಾರೆ.
ಹಾಲಿ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ವಿಪರೀತ ಮತ್ತು ಅಸಹಜ ರೀತಿಯಲ್ಲಿ ಹೆಚ್ಚಲಿವೆ ಎಂದು ಅಭಿಪ್ರಾಯ ಪಟ್ಟಿರುವ ನಾರಾ ವೈಜಯಂತಿ ರೆಡ್ಡಿ, ಕ್ಷೇತ್ರ ಪುನರ್ವಿಂಗಡಣೆಯು ಜನಸಂಖ್ಯೆ ನಿಯಂತ್ರಣದಲ್ಲಿ ವಿಫಲ ಆಗಿರುವ ರಾಜ್ಯಗಳಿಗೆ ವರದಾನವಾದರೆ, ನಮ್ಮಂತಹ ಜನಸಂಖ್ಯೆ ನಿಯಂತ್ರಿಸಿರುವ ರಾಜ್ಯಗಳಿಗೆ ಮಾರಕ ಆಗಲಿದೆ ಎಂದಿದ್ದಾರೆ.
ಉತ್ತರ ಭಾರತದಲ್ಲಿಯೇ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಾದರೆ ಇದು ನಿರ್ದಿಷ್ಟ ಪಕ್ಷಕ್ಕೆ ಲಾಭ ತರುವ ಹುನ್ನಾರ ಆಗುವುದು ಸ್ಪಷ್ಟ, ಹೀಗಾಗಿ ಈ ಅವೈಜ್ಞಾನಿಕ ಕ್ಷೇತ್ರ ಪುನರ್ವಿಂಗಡಣೆಯನ್ನು ಕೈ ಬಿಡಬೇಕು, ವಿಪಕ್ಷಗಳ ಸಲಹೆ ಪಡೆದು, ತಜ್ಞರ ಅಭಿಪ್ರಾಯ ಪದೆದು ಕ್ಷೇತ್ರ ಪುನರ್ವಿಂಗಡಣೆ ದೇಶದ ಎಲ್ಲ ರಾಜ್ಯಗಳಿಗೆ ಸಮನಾದ ಮತ್ತು ನ್ಯಾಯಯುತ ಪ್ರಾತಿನಿಧ್ಯ ನೀಡುವಂತಾಗಬೇಕೆಂದು ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿ ದೇಶದ ಎಲ್ಲ ಮಹಿಳೆಯರಿಗೆ ಸಿಗಬೇಕು ನಿಜ, ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯೂ ಆಗಬೇಕು, ಆದರೆ ದೇಶದ ಅಭಿವೃದ್ಧಿಯಲ್ಲಿ ಗುರುತರ ಕೊಡುಗೆ ನೀಡಿರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಿ, ಅಧಿಕಾರ ಹಿಡಿಯುವ ಏಕೈಕ ಉದ್ಧೇಶಕ್ಕೆ ಸ್ವಾರ್ಥಪರ ಅಸ್ತ್ರವಾಗಿ ಬಳಕೆಯಾಗಬಾರದು ಎಂದು ವೀರಶೈವ ಲಿಂಗಾಯತ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ವರದಿ: ಮಹಮ್ಮದ್ ಗೌಸ್
