ವಿಜಯನಗರದಲ್ಲಿ ನಕಲಿ ವೈದ್ಯರ ವಿರುದ್ಧ ದಾಳಿ: ಅನಧಿಕೃತ ಕ್ಲಿನಿಕ್‌ಗಳ ಮುಚ್ಚುವಿಕೆ – ಆರೋಗ್ಯ ಇಲಾಖೆಯ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ*
ವಿಜಯನಗರ / ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್
ಏ, 1.ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿಗೆ ತಡೆಯೊಡ್ಡಲು ವಿಜಯನಗರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಆರ್‌ಎಂಪಿ ಹಾಗೂ ಹೋಮಿಯೋಪತಿ ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡು ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ತೆರೆಯುವ ಮೂಲಕ ಅಲೋಪಥಿ (ಇಂಗ್ಲೀಷ್ ಮೆಡಿಸಿನ್) ಚಿಕಿತ್ಸೆ ನೀಡುತ್ತಿದ್ದ ಕೆಲವರು ಜನರ ಆರೋಗ್ಯದೊಂದಿಗೆ ಅಪಾಯಕಾರಿ ರೀತಿಯಲ್ಲಿ ಚೆಲ್ಲಾಟ ಆಡುತ್ತಿರುವುದು ಬೆಳಕಿಗೆ ಬಂದಿದೆ.

ಇಂತಹ ನಕಲಿ ವೈದ್ಯರು ರೋಗಿಗಳಿಗೆ ಹೆಚ್ಚಿನ ಪ್ರಮಾಣದ (ಹೈಡೋಸ್) ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳನ್ನು ನೀಡಿ ತಾತ್ಕಾಲಿಕವಾಗಿ ಗುಣಮುಖತೆ ತೋರಿಸಿದರೂ, ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಈ ಹಿನ್ನಲೆಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನಿರ್ದೇಶನದಂತೆ ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ವಿನೋದ್ ಹಾಗೂ ವಿಜಯನಗರ ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ. ವಿನಯ್ ಅವರ ನೇತೃತ್ವದಲ್ಲಿ ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಯ ವೇಳೆ ನಿಯಮ ಉಲ್ಲಂಘನೆ ಪತ್ತೆಯಾದ ಹಲವು ಕ್ಲಿನಿಕ್‌ಗಳನ್ನು ತಕ್ಷಣವೇ ಮುಚ್ಚಿಸಿ ಸಂಬಂಧಪಟ್ಟವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.
*ದಾಳಿಗೆ ಒಳಗಾದ ಕ್ಲಿನಿಕ್‌ಗಳ ವಿವರ:*
* ತಿಮ್ಮಪ್ಪ – ಪೊಲೀಸ್ ಕ್ವಾರ್ಟರ್ಸ್ ಹತ್ತಿರ, ಕಮಲಾಪುರ
* ಸುಲೇಮಾನ್ – ಕೊಂಡನಾಯಕನಹಳ್ಳಿ
* ಕೊಟ್ರೇಶ್ – ಊರಮ್ಮ ಬೈಲು, ಕಮಲಾಪುರ
* ರಾಮಾಚಾರಿ – ಕೋಟೆ ಏರಿಯಾ, ಕಮಲಾಪುರ
ಸಾರ್ವಜನಿಕರು ಆರೋಗ್ಯ ಇಲಾಖೆಯ ಕ್ರಮವನ್ನು ಸ್ವಾಗತಿಸಿದ್ದು, ಇಂತಹ ಕಾರ್ಯಗಳಿಂದ ಜನರ ಪ್ರಾಣ ರಕ್ಷಣೆಗಾಗಿ, ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಕ್ಕೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿ ಅಧಿಕಾರಿಗಳನ್ನು ಪ್ರಶಂಸಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಅರ್ಹ ಹಾಗೂ ನೋಂದಾಯಿತ ವೈದ್ಯರನ್ನು ಮಾತ್ರ ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಅನುಮಾನಾಸ್ಪದ ಕ್ಲಿನಿಕ್‌ಗಳ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಜನರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವರದಿ :ಮಹಮ್ಮದ್ ಗೌಸ್
