ವಿಜಯನಗರ / ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರತಿಭಾವಂತ ಸಂಗೀತ ಹಾಗೂ ರಂಗಭೂಮಿ ಕಲಾವಿದೆ ಶ್ರೀಮತಿ ಅನುರಾಧ ವಾಲ್ಮೀಕಿ ಅವರಿಗೆ ರಾಜ್ಯ ಮಟ್ಟದ ಗೌರವ ಲಭಿಸಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 24, 2026ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ” ನೀಡಿ ಸನ್ಮಾನಿಸಲು ಸರ್ಕಾರ ತೀರ್ಮಾನಿಸಿದೆ.
ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು, ನಂತರ ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಪ್ರಸ್ತುತ ಮಹಿಳಾ ಸಂಗೀತ ಕಲಾವಿದರ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಯಿ ದಿವಂಗತ ವೆಂಕಮ್ಮ ಅವರಿಂದ ಬಂದ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಅನುರಾಧ ಅವರು, ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ನಾಟಕ ತರಬೇತಿ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.ಹಂಪಿ ಉತ್ಸವ, ಮೈಸೂರು ದಸರಾ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳ ಹಲವಾರು ಉತ್ಸವಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಅವರು, ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 2013ರಲ್ಲಿ ಸ್ಥಾಪಿಸಿದ ‘ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ’ ಮೂಲಕ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹವಾಗಿದೆ.ಈ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅನುರಾಧ ವಾಲ್ಮೀಕಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ :ಮಹಮ್ಮದ್ ಗೌಸ್
