ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ನಿಧನ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದಾರೆ.
29ತಾ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ. ಅಲ್ಲಿ ಇಸಿಜಿ ಮಾಡಿದ್ದರು. ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು.
ಕೂಡಲೇ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕರೆತರಲಾಗಿತ್ತು. ದಾರಿಮಧ್ಯದಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಕರೆದುಕೊಂಡು ಬರುವಾಗ ಅವರ ಹೃದಯ ಚಟುವಟಿಕೆ ಮಾಡುತ್ತಿರಲಿಲ್ಲ, ನಂತರ ಸುಮಾರು 3 ಗಂಟೆಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಹೃದಯಕ್ಕೆ ಮಸಾಜ್ ಮಾಡಿ ನಮ್ಮ ಕೈಲಾದ ಪ್ರಯತ್ನ ಮಾಡಿದ್ದೇವೆ. ಆರೋಗ್ಯ ಸುಧಾರಣೆಯಾಗುತ್ತದೆಯೇ ಎಂದು ನೋಡಿದರೂ ಆಗಲಿಲ್ಲ.
ಅವರಿಗೆ ಹೃದಯಾಘಾತವಾದಾಗ ಹೃದಯ ಬಹಳ ದುರ್ಬಲವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಹೃದಯಾಘಾತವಾಗಿದೆ.ಅದರಿಂದಾಗಿ ಹೃದಯ ಶಸ್ತ್ರಚಿಕಿತ್ಸೆಗೆ ನಮಗೆ ವೈದ್ಯಕೀಯ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಕೊನೆಯ 3 ಗಂಟೆ ಮಸಾಜ್ ಮಾಡಿ ವೆಂಟಿಲೇಟರ್ ನಲ್ಲಿ ಹಾಕಿಟ್ಟು ಔಷಧಿ ಕೊಟ್ಟು ಏನಾದರೂ ಬದಲಾವಣೆಯಾಗುತ್ತದೆಯೇ ಎಂದು ನೋಡಿದ್ದೆವು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ತೀರಿಹೋದರು ಎಂದರು.
ಈ ಹಿಂದೆ ಯಾವುದೇ ಹೃದಯದ ಸಮಸ್ಯೆ ಎಂದು ಹೇಳಿಕೊಂಡು ಪುನೀತ್ ರಾಜ್ ಕುಮಾರ್ ಅವರು ಬಂದಿರಲಿಲ್ಲ ಎಂದರು.
ವರದಿ :-ಕ್ಯಾಮರ ಮೋಹಿನ್