ವಿಜಯನಗರ:ಹೊಸಪೇಟೆ (ಜಾಗೃತಿ ಬೆಳಕು ನ್ಯೂಸ್)
ಜಿಲ್ಲೆಯ ಕಲ್ಲಹಳ್ಳಿ ಗ್ರಾಮದಲ್ಲಿ ಸುಮಾರು 60 ಜನರಿಗೆ ಮೋಸ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ವಂಚಿಸಿದ ನಕಲಿ ಸ್ವಾಮಿ ಮತ್ತು ಇತರ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ರವಿವಾರ ಬಂಧಿಸಿ, 35 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಾಸ್ಥಾನ ಮೂಲದ ಹಾಗೂ ಚಿತ್ರದುರ್ಗದಲ್ಲಿ ವಾಸ ಮಾಡುತ್ತಿದ್ದ ಜಿತೇಂದ್ರ ಸಿಂಗ್ (25), ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯಕ್ (29) ಮತ್ತು ಶಂಕು ನಾಯಕ್ (30) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಲ್ಲಹಳ್ಳಿ ಗ್ರಾಮದ ಕುಮಾರ ನಾಯ್ಕ್ ಎಂಬವರಿಗೆ ಅದೇ ಗ್ರಾಮದ ತುಕ್ಯಾ ನಾಯಕ್ ಹಾಗೂ ಶಂಕು ನಾಯಕ್ ಎಂಬವರು ತಮಗೆ ಗೊತ್ತಿರುವ ರಾಜಾಸ್ಥಾನದ ಜಿತೇಂದ್ರ ಸಿಂಗ್ ಎನ್ನುವವರು ಪೂಜೆ ಮಾಡಿ ಹೆಚ್ಚಿನ ಹಣ ಮಾಡಿಕೊಡುತ್ತಾರೆಂದು ಹೇಳಿ ನಂಬಿಸಿ, ಸೆ.4ರಂದು ಜಿತೇಂದ್ರ ಸಿಂಗ್ ಅವರನ್ನು ಕರೆದುಕೊಂಡು ಬಂದು ಕುಮಾರ ನಾಯ್ಕ್ ಬಳಿ ಪರಿಚಯಿಸಿದ್ದರು.
ಇದಾದ ಬಳಿಕ 7.5 ಲಕ್ಷ ರೂ. ಇಟ್ಟು ಪೂಜೆ ಮಾಡಿಸಿದರೆ 80 ಲಕ್ಷ ರೂ. ಮಾಡಿಕೊಡುವುದಾಗಿ ಹೇಳಿ ನಂಬಿಸಿದ್ದಾರೆ. ಈ ನಕಲಿ ಸ್ವಾಮಿ ಹೇಳಿದಂತೆ ಕುಮಾರ ನಾಯ್ಕ್ 7.5 ಲಕ್ಷ ರೂ. ಹೊಂದಿಸಿ, ಅಷ್ಟು ಮೊತ್ತವನ್ನು ಇಟ್ಟು ಪೂಜೆ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಂತೆ ಮಾಡಿದ್ದರು. ಈ ಪೆಟ್ಟಿಗೆಯನ್ನು 168+2 ದಿನದ ಬಳಿಕ ತೆರೆದು ನೋಡುವಂತೆ ನಕಲಿ ಸ್ವಾಮಿ ತಿಳಿಸಿದ್ದನು.
ಈ ಮಧ್ಯೆ ಸೆ.7ರಂದು ಅದೇ ಊರಿನ ರಾಜ ನಾಯ್ಕ್ ಎಂಬುವವರ ಮನೆಗೆ ತುಕ್ಯಾ ನಾಯಕ್ ಹಾಗೂ ಶಂಕು ನಾಯಕ್ ಅವರು ಜಿತೇಂದ್ರ ಸಿಂಗ್ ಅವರನ್ನು ಕರೆದುಕೊಂಡು ಬಂದು ಪೂಜೆ ಮಾಡಿಸಲು ಹೋದಾಗ, ಜಿತೇಂದ್ರ ಸಿಂಗ್ ಅವರ ಪೂಜೆ ಸುಳ್ಳೆಂದು ಕುಮಾರ್ ನಾಯ್ಕ್ ಅವರಿಗೆ ಗೊತ್ತಾಗಿದೆ.
ಬಳಿಕ ಕುಮಾರ ನಾಯ್ಕ್ ಅವರು ಮನೆಗೆ ಹೋಗಿ ಜಿತೇಂದ್ರ ಸಿಂಗ್ ಈ ಮೊದಲು ಪೂಜೆ ಮಾಡಿಕೊಟ್ಟಿದ್ದ ಪೆಟ್ಟಿಗೆಯನ್ನು ತರೆದು ನೋಡಿದ್ದಾರೆ. ಅದರಲ್ಲಿ ಅಗರಬತ್ತಿ ಪ್ಯಾಕೆಟ್‍ಗಳು ಟವೆಲ್‍ಗಳು ಇದ್ದದ್ದು ಕಂಡು ಬಂದಿದೆ. ಇದಾದ ಬಳಿಕ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ದೂರು ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಂಡ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ 35,14,740 ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ :ಮೊಹಮ್ಮದ್ ಗೌಸ್