ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ

0
154

ಜಾಗೃತಿ ಬೆಳಕು ನ್ಯೂಸ್

ಹಂಪಿ ಉತ್ಸವಕ್ಕೆ ಜನಸ್ತೋಮದ ನಡುವೆ ತೆರೆ

ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ

ಹೊಸಪೇಟೆ(ವಿಜಯನಗರ).
ಫೆ.2 ರಿಂದ ಆರಂಭವಾದ ಹಂಪಿ ಉತ್ಸವ ಅಭೂತಪೂರ್ವವಾಗಿ ನೆರವೇರಿದೆ. 3 ದಿನಗಳ ಉತ್ಸವಕ್ಕೆ ಭಾನುವಾರ ಹಂಪಿ ಗಾಯಿತ್ರಿ ಪೀಠದ ವೇದಿಕೆಯಲ್ಲಿ ವಿದ್ಯಕ್ತವಾಗಿ ಸಮಾರೋಪ ಸಮಾರಂಭ ಆಯೋಜಿಸುವ ಮೂಲಕ ತೆರೆ ಎಳೆಯಲಾಯಿತು. ಉತ್ಸವದಲ್ಲಿ 12 ಲಕ್ಷಕ್ಕೂ ಜನರು ಭಾಗಿಯಾಗಿ ಉತ್ಸವ ಸವಿ ಸವಿದರು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮಾತನಾಡಿ, ಮೂರು ದಿನಗಳ ನಾಡಹಬ್ಬದಂತೆ ಹಂಪಿ ಉತ್ಸವ ಜರುಗಿದೆ. ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು ಉತ್ತಮ ಕಾರ್ಯನಿವಹಿಸಿದ್ದು ಎಲ್ಲರಿಗೂ ಅಭಿನಂದನೆಗಳು ಹಾಗೂ ಧನ್ಯವಾದ.
ಹಂಪಿ ಉತ್ಸವಕ್ಕೆ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲರೂ ನಮ್ಮ ನಾಡಿನ ಉತ್ಸವ ಎಂದೇ ಪಾಲ್ಗೊಂಡಿದ್ದಾರೆ. ಈ ಹಿಂದಿನ ಎಲ್ಲಾ ಉತ್ಸವಗಳಿಂತಲೂ ಅಧಿಕ ಜನಸ್ತೋಮ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದ್ದಾರೆ. ಮೂರು ದಿನದ ನಾಡಹಬ್ಬಕ್ಕೆ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಾರ್ಯನಿರ್ವಹಿಸಿದೆ. ಕಿರಿದಾದ ರಸ್ತೆ ಹಾಗೂ ಅಧಿಕ ವಾಹನ ದಟ್ಟಣೆಯಿಂದ ಟ್ರಾಫಿಕ್ಸ್ ಸಮಸ್ಯೆ ಉಂಟಾಗಿದೆ. ಇದು ಕೂಡ ಉತ್ಸವ ಯಶಸ್ಸಿನ ಸೂಚಕ ಎಂದರು. ಹಂಪಿಯ ತುಂಬೆಲ್ಲಾ ಹೋಟೆಲ್ ಸ್ಟಾಲ್‌ಗಳು ರಿಯಾಯಿತಿ ದರದಲ್ಲಿ ಊಟ ಒದಗಿಸಿವೆ. ಇವರ ಸೇವೆ ಆಧರಿಸಿ ಜಿಲ್ಲಾಡಳಿತದಿಂದ ಹೋಟೆಲ್ ಸ್ಟಾಲ್‌ಗಳ ಬಾಡಿಗೆ ಮನ್ನಾ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.

ಕನ್ನಡ ಚಲಚಿತ್ರ ನಟ, ನಿರ್ದೇಶಕ ರವಿಚಂದ್ರನ್, ಮಾತನಾಡಿ ಮನೆಯ ಸದಸ್ಯರು ಖುಷಿಯಿಂದ ಇರಲು ಹಬ್ಬಗಳು ಆಚರಿಸುತ್ತೇವೆ. ಸ್ನೇಹಿತರು ಒಂದಾಗಿ ಸೇರಲು ಹುಟ್ಟು ಹಬ್ಬ, ಪ್ರೇಮಿಗಳ ದಿನಾಚರಣೆ ಮಾಡಿತ್ತೇವೆ. ಇದೇ ಮಾದರಿಯಲ್ಲಿ ಇಡೀ‌ ಹಂಪಿ ನಾಡು ಒಂದಾಗಲು ಹಂಪಿ ಉತ್ಸವ ಆಚರಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಹಂಪಿ ಉತ್ಸವ ಅದ್ಧೂರಿ ಆಚರಣೆ ಮುಂದುವರೆಯಬೇಕು. ಹಂಪಿಯ ಒಂದೊಂದು ಕಲ್ಲಿನಲ್ಲೂ ಸ್ವರ ಅಡಗಿದೆ. ಪ್ರತಿ ಸ್ಮಾರಕಗಳಲ್ಲಿ ಅಂದಿನ ಕಲಾವಿದರ ಶ್ರಮವಿದೆ. ಅವರ ಕಲಾ ನಿರ್ಮಾಣವೇ ನಮ್ಮನ್ನು ಹಂಪಿಗೆ ಬರುವಂತೆ ಮಾಡಿದೆ. ಹಂಪಿ ಉತ್ಸವದ ಮೂಲಕ ಗತಗಾಲದ ವಿಜಯನಗರದ ವೈಭವ ಮರುಕಳಿಸಬೇಕು ಎಂದರು.

ಪ್ರೇಮಲೋಕ-2 ಚಿತ್ರ ನಿರ್ಮಾಣಕ್ಕೆ ಹಂಪಿ ಉತ್ಸವ ನಾಂದಿ

36 ವರ್ಷಗಳ ಹಿಂದಿನ ಪ್ರೇಮಲೋಕ ಜನಮಾನಸದಲ್ಲಿ ನನ್ನ ಹೆಸರು ಚಿರಸ್ಥಾಯಿ ಆಗುವಂತೆ ಮಾಡಿದೆ. ಆಗಿನ ಕಾಲದಲ್ಲಿಯೇ ರೂ.1.50 ಕೋಟಿ ವೆಚ್ಚಮಾಡಿ ಪ್ರೇಮಲೋಕ ನಿರ್ದೇಶಿಸಿ ನಿರ್ಮಿಸಿದ್ದೆ. ಜನ ಚಿತ್ರಗೆಲ್ಲಿಸಿ ಇತಿಹಾಸ ಬರೆದರು. ಇಂದಿಗೂ ನನಗೆ ಪ್ರೀತಿ ಒಂದೇ. ನನ್ನ ತಂದೆ ತಾಯಿ ನನಗೆ ಪ್ರೀತಿ ನೀಡಿ ಬೆಳಸಿದ್ದಾರೆ. ನನಗೆ ತಿಳಿದಿರುವುದು ಪ್ರೀತಿ ಒಂದೇ. ಇತ್ತೀಚಿನ ದಿನಗಳಲ್ಲಿ ಗನ್ ಹಿಂಸೆಯ ಅನಾವರಣ ಹೆಚ್ಚಾಗುತ್ತಿದೆ. ನಾನು ಸಂಗೀತ ನಂಬಿ ಚಿತ್ರ ನಿರ್ಮಿಸಿದವನು. ಪ್ರೇಮಲೋಕ-2 ಕೂಡ ಸಂಗೀತಮಯ ಚಿತ್ರವಾಗಿರಲಿದೆ. 20 ರಿಂದ‌ 25 ಹಾಡುಗಳು ಇರಲಿವೆ ಎಂದು ರವಿಚಂದ್ರನ್‌ ಈ ಸಂದರ್ಭದಲ್ಲಿ ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪ್ರಸ್ತಾವಿಕವಾಗಿ ಮಾತನಾಡಿ, ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿಯ ಮಹತ್ವ ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಆಯೋಜಿಸಲಾಗಿದೆ. ನಾಲ್ಕು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಜ.31 ರಂದು ತುಂಗಾರತಿ ಮೂಲಕ ಹಂಪಿ ಉತ್ಸವಕ್ಕೆ ಆರಂಭ ಒದಗಿಸಲಾಯಿತು. ಸುಮಾರು 10 ಸಾವಿರ ಜನರು ಪಾಲ್ಗೊಂಡಿದ್ದರು. ಹೊಸಪೇಟೆಯಲ್ಲಿ ಜರುಗಿದ ವಸಂತ ವೈಭವ ಮೆರವಣಿಗೆಯಲ್ಲಿ ನಾಡಿನ ವಿವಿಧ ದೇಶಿ ಸಂಸ್ಕೃತ ಬಿಂಬಿಸುವ ಕಲಾತಂಡಗಳು ಭಾಗಿಸಿದ್ದವು. ಉತ್ಸವದಲ್ಲಿ ರೈತರು ಪಾಲ್ಗೊಳ್ಳಲು ಪ್ರೇರಿಪಿಸಲು ರೈತರ ರಾಸುಗಳ ಪ್ರದರ್ಶನ ಏರ್ಪಿಡಸಲಾಗಿತ್ತು. 110ಕ್ಕೂ ಹೆಚ್ಚಿನ ಜೊತೆ ರೈತರ ರಾಸುಗಳ ಪಾಲ್ಗೊಂಡಿದ್ದವು. ಟಗರು ಪ್ರದರ್ಶನ, ಶ್ವಾನ ಪ್ರದರ್ಶನಗಳು ಸಹ ಜನಮನ ಸೂರೆಗೊಂಡಿವೆ. ಹಂಪಿ ವಿರೂಪಾಕ್ಷ ದೇವಾಲಯದ ವೇದಿಕೆಯಲ್ಲಿ ಹಂಪಿ ಇತಿಹಾಸ, ಮಹಿಳಾ ಗೋಷ್ಠಿ, ಮಕ್ಕಳ ಗೋಷ್ಠಿ ಆಯೋಜಿಸಿ ಮಹಿಳೆ ಹಾಗೂ ಮಕ್ಕಳನ್ನೂ ಸಹ ಉತ್ಸವದ ಕಡೆ ಆಕರ್ಷಿಸಲಾಗಿದೆ. ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಸಿರಿಧಾನ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಬೆಂಗಳೂರಿನ ಲಾಲ್‌ಭಾಗ್ ಮೀರಿಸುವ ರೀತಿ ಫಲಪುಷ್ಪ ಪ್ರದರ್ಶನ ಮೂಡಿ ಬಂದಿದೆ. ಉತ್ಸವದ ಕಡೆಯ ದಿನ ಜಾನಪದ ವಾಹಿನಿ ಕಾರ್ಯಕ್ರಮವನ್ನು 50 ಸಾವಿರಕ್ಕೂ ಹೆಚ್ಚಿನ ಜನರು ನೋಡಿ ಸಂಭ್ರಮಿಸಿದರು. ಉತ್ಸವವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಆಯೋಜಿಸಲು ಜನರು ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಸಚಿವ ಆನಂದ್ ಸಿಂಗ್, ಹಂಪಿ ಗ್ರಾ.ಪಂ. ಅಧ್ಯಕ್ಷ ರಜನಿ ಷಣ್ಮುಖ, ನೆನಪಿರಲಿ ಖ್ಯಾತಿಯ ನಟ ಪ್ರೇಮ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಸಂಗೀತ ಸಂಯೋಜಕ ಸಾಧು ಕೋಕಿಲ ಇದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ವೇದಿಕೆ ಮೇಲೆ ಉತ್ಸವ ಆಯೋಜನೆಯಲ್ಲಿ ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here