ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟ, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿ,ಡಿಸಿ. ವೆಂಕಟೇಶ್,!

0
338

ಯಾವುದೇ ಲೋಪದೋಷ ಉಂಟಾಗದಂತೆ ಚುನಾವಣೆ ನಡೆಸಲು ಕ್ರಮ: ಡಿಸಿ ವೆಂಕಟೇಶ್

ಹೊಸಪೇಟೆ:- ಜಾಗೃತಿ ಬೆಳಕು ಬ್ರೇಕಿಂಗ್

ಮಾ,30. ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ಕ್ಕೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಾಗಲಿದ್ದು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡ ಸಿದ್ದತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೈಗೊಂಡ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾಹಿತಿ ನೀಡಿದರು.
ಚುನಾವಣಾ ವೇಳಾಪಟ್ಟಿ; ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು ಏ.20 ರವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರಗಳ ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 10 ರಂದು ಚುನಾವಣಾ ಮತದಾನ ನಡೆಯಲಿದೆ. ಮತ ಎಣಿಕೆಯು ಮೇ 13 ರಂದು ನಡೆಯಲಿದ್ದು ಮೇ 15 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ನೀತಿ ಸಂಹಿತೆ ಇಂದಿನಿಂದ ಅಧಿಕೃತವಾಗಿ ಜಾರಿಯಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಸಕಲ ಸಿದ್ದತೆ ಕೈಗೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ನೂತನ ಜಿಲ್ಲೆ ಘೋಷಣೆಯಾದ ಬಳಿಕ ನಡೆಯುತ್ತಿರುವ ಮೊಟ್ಟಮೊದಲ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇದಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ ಯಶಸ್ವಿ ಚುನಾವಣೆ ನಡೆಸಲಾಗುತ್ತದೆ ಎಂದರು.
ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರು ಸ್ವೀಕರಿಸಲು ವಿಧಾನಸಭಾ ಕ್ಷೇತ್ರವಾರು ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಲಾಗಿದ್ದು, ಕ್ಷೇತ್ರವಾರು ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಸಹ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ವಿವರ; 88-ಹೂವಿನಹಡಗಲಿ(08399-2402380), 89-ಹಗರಿಬೊಮ್ಮನಹಳ್ಳಿ(08397-238255), 90-ವಿಜಯನಗರ(08394-232209), 96-ಕೂಡ್ಲಿಗಿ(08391-220225) ಹಾಗೂ 104-ಹರಪನಹಳ್ಳಿ(08398-280262) ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1950, ಮೊ.9019042744 ಸಂಖ್ಯೆಗೆ ದೂರು ದಾಖಲಿಸಬಹುದು.

ನುರಿತ ಚುನಾವಣಾಧಿಕಾರಿಗಳ ನೇಮಕ: ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಚುನಾವಣಾ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಲು ನಿರ್ದಿಷ್ಟ ಹುದ್ದೆ, ಅಧಿಕಾರ ಹೊಂದಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎರಡು ಹಂತದ ತರಬೇತಿ ನೀಡಿ ಕ್ಷೇತ್ರವಾರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರವಾರು ನಿಯೋಜನೆಗೊಂಡ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ವಿವರ:
88-ಹೂವಿನಹಡಗಲಿ ಕ್ಷೇತ್ರಕ್ಕೆ ಚುನಾವಣಾಧಿಕಾರಿಯಾಗಿ ಶರಣಪ್ಪ ಮುದಗಲ್, ಸಹಾಯಕ ಚುನಾವಣಾಧಿಕಾರಿಯಾಗಿ ಶರಣಮ್ಮ ಅವರನ್ನು ನಿಯೋಜಿಸಲಾಗಿದೆ. ಅದೇ ರೀತಿಯಾಗಿ 89-ಹಗರಿಬೊಮ್ಮನಹಳ್ಳಿ ತೇಜಾನಂದ ರೆಡ್ಡಿ ಹಾಗೂ ಚಂದ್ರಶೇಖರ್ ಗಾಳಿ, 90-ವಿಜಯನಗರ(ಹೊಸಪೇಟೆ) ಸಿದ್ದರಾಮೇಶ್ವರ್ ಹಾಗೂ ವಿಶ್ವಜೀತ್ ಮೆಹ್ತಾ, 96-ಕೂಡ್ಲಿಗಿ ಚುನಾವಣಾಧಿಕಾರಿ ಈರಣ್ಣ ಬಿರಾದರ್ ಹಾಗೂ ಟಿ.ಜಗದೀಶ್ 104-ಹರಪನಹಳ್ಳಿ ಚುನಾವಣಾಧಿಕಾರಿ ಟಿ.ವಿ.ಪ್ರಕಾಶ್ ಹಾಗೂ ಶಿವಕುಮಾರ್ ಬಿರಾದಾರ್.

ಚೆಕ್‍ಪೋಸ್ಟ್‍ಗಳಲ್ಲಿ ಸಿಸಿಟಿವಿ ಕಣ್ಗಾವಲು:

ಜಿಲ್ಲೆಗೆ ಸಂಬಂಧಿಸಿದಂತೆ ಅಂತರ್‍ಜಿಲ್ಲಾ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿ ಸೇರಿದಂತೆ ಒಟ್ಟು 23 ಚೆಕ್‍ಪೋಸ್ಟ್ ಕಾರ್ಯಾರಂಭ ಮಾಡಲಾಗಿದ್ದು ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದ್ದು ಇದರ ನೇರ ಸಂಪರ್ಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗುವ ಕಂಟ್ರೋಲ್ ರೂಂಗೆ ಇರಲಿದ್ದು ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೊಬೈಲ್‍ಗೂ ನೇರ ಸಂಪರ್ಕ ಇರಲಿದೆ. ಆಯಾ ಚೆಕ್‍ಪೋಸ್ಟ್‍ಗಳಲ್ಲಿ ಎಸ್‍ಎಸ್‍ಟಿ ತಂಡ ಹಾಗೂ ಎಫ್‍ಎಸ್‍ಟಿ ತಂಡ ಕಾರ್ಯನಿರ್ವಹಿಸಲಿದೆ. ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಒಳಗೊಂಡ ತಂಡ ಇದಾಗಿರುತ್ತದೆ.
ದಾಸ್ತಾನು ಹಾಗೂ ಸಾಗಾಣಿಕೆ ಮಾಡಲಾಗುತ್ತಿದ್ದ ವಸ್ತುಗಳು ಹಾಗೂ ದಾಖಲಾತಿ ಒದಗಿಸದೇ ಸಾಗಿಸುತ್ತಿದ್ದ ಹಣ, ಮದ್ಯ ಜಪ್ತಿ ಮಾಡಲಾಗುತ್ತಿದೆ. ಈಗಾಗಲೇ ಅಬಕಾರಿ ಇಲಾಕೆಯಿಂದ 44 ಪ್ರಕರಣ, ಆರಕ್ಷಕ ಇಲಾಖೆಯಿಂದ 18 ಪ್ರಕರಣ ದಾಖಲಿಸಲಾಗಿದೆ.
ಇಲ್ಲಿಯವರೆಗೂ3.01 ಕೋಟಿ ರೂ. ನಗದು ಹಣ ಸೇರಿದಂತೆ ಒಟ್ಟು 3.44 ಕೋಟಿ ಮೌಲ್ಯದ ಹಣ, ಮದ್ಯ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪರವಾನಿಗೆ ಪಡೆಯದ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ರಾಜಕೀಯ ಚಟುವಟಿಕೆಗಳ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಚಿತ್ರಗಳನ್ನು ತೆರವುಗಳಿಸಲು ಈಗಾಗಲೇ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1219 ಮತಗಟ್ಟೆಗಳು:
ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ನಗರ ಪ್ರದೇಶ 868 ಹಾಗೂ ಗ್ರಾಮೀಣ ಪ್ರದೇಶದ 351 ಮತಗಟ್ಟೆಗಳು ಸೇರಿದಂತೆ ಒಟ್ಟು 1219 ಮತಕೇಂದ್ರಗಳಿವೆ. ಅವುಗಳಲ್ಲಿ 348 ಸೂಕ್ಷ್ಮ ಮತಕೇಂದ್ರಗಳಾಗಿದ್ದು, ಈ ಹಿಂದೆ ನಡೆದ ಚುನಾವಣೆಗಳಲ್ಲಿ ಉಂಟಾದ ಘಟನೆಗಳ ಮಾಹಿತಿ ಅನ್ವಯ ಸೂಕ್ಷ್ಮ ಮತಕೇಂದ್ರಗಳಾಗಿ ಗುರುತಿಸಲಾಗಿದೆ. ಹರಪನಹಳ್ಳಿ ಕ್ಷೇತ್ರದಲ್ಲಿ ಅತಿಹೆಚ್ಚು(257) ಮತಗಟ್ಟೆಗಳಿವೆ.

5 ವಿಶೇಷ ಮತಕೇಂದ್ರಗಳು:
ಪ್ರತಿ ಮತಕೇಂದ್ರದಲ್ಲೂ ಕನಿಷ್ಠ ಮೂಲಕಸೌಕರ್ಯ ಒದಗಿಸುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಮಹಿಳೆ(ಸಖಿ ಮತಗಟ್ಟೆ), ಅಂಗವಿಕಲ, ಯುವ ಸಿಬ್ಬಂದಿ ಒಳಗೊಂಡ 5 ವಿಶೇಷ ಮತಕೇಂದ್ರಗಳನ್ನು ಗುರುತಿಸಲಾಗಿದೆ. ಮತದಾರರಿಗೆ ಮತದಾನದ ಮಹತ್ವ ಹಾಗೂ ಆಕರ್ಷಣೆ ಉಂಟಾಗಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತಕೇಂದ್ರಗಳಲ್ಲಿ ಜಿಲ್ಲೆಯ ಸಾಂಸ್ಕøತಿಕ ವೈಭವ ಪ್ರದರ್ಶಿಸುವ ಚಿತ್ರಗಳನ್ನು ಬಿಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 10 ಲಕ್ಷ ಜನ ಮತದಾದರರು, ಪುರುಷರೇ ಮೇಲುಗೈ:
ವಿಜಯನಗರ ಜಿಲ್ಲೆಯಲ್ಲಿ 2023 ರ ಜನವರಿ 5 ರ ಅಂತಿಮ ಮತದಾರರ ಪಟ್ಟಿಯನ್ವಯ ಒಟ್ಟು 10,68,913 ಜನ ಮತದಾರರಿದ್ದಾರೆ. ವಿಜಯನಗರ(ಹೊಸಪೇಟೆ) ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು (2,43,457) ಮತದಾರರಿದ್ದಾರೆ. ಜಿಲ್ಲೆಯಲ್ಲಿ ಪುರುಷ ಮತದಾರರೇ ಹೆಚ್ಚಿದ್ದು, 5,35,480 ಜನ ಪುರುಷರು, 5,33,292 ಜನ ಮಹಿಳಾ ಮತದಾರರು ಹಾಗೂ 141 ಜನ ಇತರೆ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 15,091 ಜನ ಅಂಗವಿಕಲ ಮತದಾರರಿದ್ದು, 80 ವರ್ಷ ಮೇಲ್ಪಟ್ಟ ಮತದಾರರು 17,498 ಜನರಿದ್ದಾರೆ. ಇವರಿಗೆ ಈ ಭಾರಿಯ ಚುನಾವಣೆಯಲ್ಲಿ ಮನೆಯಲ್ಲಿಯೇ ಕುಳಿತು ಮತದಾನ ಮಾಡಲು ಅಂಚೆ ಮತದಾನಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮತದಾನ ಮಾಡುವವರು ಮುಂಚಿತವಾಗಿ ನೋಂದಣಿ ಕೈಗೊಳ್ಳಬೆಕು ಒಮ್ಮೆ ಅಂಚೆ ಮತದಾನಕ್ಕೆ ಒಪ್ಪಿಗೆ ನೀಡಿದ ಮೇಲೆ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಗೆ ಐಟಿಬಿ ಅರೆ ಸೇನಾಪಡೆ ಭದ್ರತೆ:
ಚುನಾವಣೆಗೆ ಸಂಬಂಧಿಸಿದಂತೆ ಐಟಿಬಿಪಿ(ಇಂಡೋ-ಟಿಬೆಟಿಯನ್ ಗಡಿ ಪೊಲೀಸ್) ಪಡೆಯನ್ನು ನಿಯೋಜಿಸಲಾಗಿದ್ದು, ಮೂರು ತಂಡಗಳು ಒಂದೆರಡು ದಿನಗಳಲ್ಲಿ ಆಗಮಿಸಲಿದ್ದು ಪ್ರತಿ ತಂಡದಲ್ಲಿ 90 ಸಿಬ್ಬಂದಿಗಳಿರುವರು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಮಾತನಾಡಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರವಾನಿಗೆ ಹೊಂದಿದ ಒಟ್ಟು 643 ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಹಿಂತಿರುಗಿಸಲು ಸೂಚಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿತರಾಗಿರುವ 28 ಜನರ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರಲ್ಲಿ 10 ಜನರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದ್ದು ಇನ್ನೂ 18 ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಬಿ. ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಹಾಗೂ ತಹಶೀಲ್ದಾರ್ ಕಾರ್ತಿಕ್ ಇದ್ದರು.

ವರದಿ :- ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here