ಹೊಸಪೇಟೆ:- ಜಾಗೃತಿ ಬೆಳಕು
ನ್ಯಾಯಾಲಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ!
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಬಳಸಿಕೊಳ್ಳಲು ಸಲಹೆ!
ನಗರದ ಹಿರಿಯ ನಾಗರಿಕರು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಹೊಸಪೇಟೆ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕಿಶನ್.ಬಿ.ಮಾಡಲಗಿ ಹೇಳಿದರು.
ನಗರದ ನ್ಯಾಯಾಲಯ ಆವರಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಅಪಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಯುವಕರಲ್ಲಿ ಹಿರಿಯ ಕುರಿತು ಅಸಡ್ಡೆ ಮನೋಭಾವನೆ, ನಿಷ್ಕಾಳಜಿ ಮಾಡುವ ಕಾರ್ಯ ಹೆಚ್ಚುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಹಿರಿಯ ನಾಗರಿಕರಿಗೆ ಏನಾದರೂ ತೊಂದರೆಯಾದರೆ ಕಾನೂನಿನ ನೆರವು ಪಡೆಯಲು ಅವಕಾಶ ನೀಡಲಾಗಿದೆ. ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅಡಿಯಲ್ಲಿ ಸಹಾಯಕ ವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕರುಣಾನಿಧಿ ಮಾತನಾಡಿ, 2004ರಿಂದ 2009ರಲ್ಲಿ ದೇಶದಲ್ಲಿ ಪ್ರಮುಖ ಸಮಾಜಮುಖಿ ಕಾಯ್ದೆಗಳು ಜಾರಿಗೆ ಬಂದವು. ಅದರಲ್ಲಿ ಹಿರಿಯ ರಕ್ಷಣಾ ಕಾಯ್ದೆ ಕೂಡ ಒಂದು. ಈ ಕಾಯ್ದೆಯಡಿ ಹಿರಿಯ ನಾಗರಿಕರಿಗೆ ಹೆಚ್ಚಿನ ರಕ್ಷಣೆ ನೀಡಲಾಗಿದೆ. ತಮ್ಮ ಮಕ್ಕಳಿಗೆ ದಾನವಾಗಿ ಹಾಗೂ ಇನ್ನಿತರ ರೀತಿಯಿಂದ ನೀಡಿರುವ ಆಸ್ತಿಯನ್ನು ಒಂದು ವೇಳೆ ಮಕ್ಕಳು ತಮಗೆ ತೊಂದರೆ ನೀಡಿದರೆ ಪುನಃ ಆಸ್ತಿಯನ್ನು ಮರಳಿ ಪಡೆಯಬಹುದು ಎಂದರು.ಹಿರಿಯ ನಾಗರಿಕರ ಅನುಭವ ಸಮಾಜಕ್ಕೆ ಬೇಕಾಗಿದೆ. ಹಾಗಾಗಿ ಹಿರಿಯ ನಾಗರಿಕರು ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನೀಡುವುದರ ಮೂಲಕ ನಿಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಕರುಣಾನಿಧಿ ಸಲಹೆ ನೀಡಿದರು.ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಹೊಸಪೇಟೆ ತಾಲೂಕಿನ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ ಹಾಗೂ ಮಾತನಾಡಿ, ಸಮಾಜಕ್ಕೆ ನಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.ತಾಲೂಕು ಕಾನೂನು ಸೇವಾ ಸಮಿತಿಯ ಸಹಾಯಕ ಆಡಳಿತಾಧಿಕಾರಿ ಎಸ್.ಬಿ.ಕಮತಗಿ, ವಕೀಲರಾದ ಮರಿಯಪ್ಪ, ಸಿಂಗ್ ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು. ನ್ಯಾಯವಾದಿ ಕೆ.ರಾಮಪ್ಪ ಸ್ವಾಗತಿಸಿ, ನಿರೂಪಿಸಿದರು.
ವರದಿ :-ಮೊಹಮ್ಮದ್ ಗೌಸ್