ಹೊಸಪೇಟೆ:-ಜಾಗೃತಿ ಬೆಳಕು
ಅ,28, ಕನ್ನಡ ರಾಜ್ಯೋತ್ಸವವನ್ನು ವಿಜಯನಗರ ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು (ಅ.27) ವಿಜಯನಗರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತ್ಯೇಕ ವಿಜಯನಗರ ಜಿಲ್ಲೆಯಾದ ನಂತರ ಇದು ಸೇರಿ ಎರಡನೇ ವರ್ಷ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯು ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಸಿದ್ದತೆ ಕೈಗೊಳ್ಳಲಾಗಿದೆ. ನವಂಬರ್ 1ರಂದು ಬೆಳಗ್ಗೆ 9 ಗಂಟೆಗೆ ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರೆವೇರಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರೆವೇರಿಸಲಿದ್ದು ನಂತರ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರೆವೇರಿಸಿ ರಾಜ್ಯೋತ್ಸವ ಸಂದೇಶ ನೀಡುವರು. ನಂತರ ವಿವಿಧ ಶಾಲಾ, ಕಾಲೇಜು ಹಾಗೂ ಪೊಲೀಸ್ ಇಲಾಖೆ ಮತ್ತು ಆಶಾ, ಅಂಗನವಾಡಿ, ಎನ್.ಸಿ.ಸಿ.ಸ್ಕೌಟ್ಸ್ ಮತ್ತು ಗೈಡ್ಸ್, ಪೌರಕಾರ್ಮಿಕರಿಂದ ಆಕರ್ಷಕ ಪಥಸಂಚಲನ ನಡೆಸಲಿದ್ದು ಗೌರವ ವಂದನೆ ಸ್ವೀಕರಿಸುವರು.
ಹಂಪಿಯಿಂದ ಕನ್ನಡ ಜ್ಯೋತಿ; ರಾಜ್ಯೋತ್ಸವದ ಅಂಗವಾಗಿ ಅಂದು ಬೆಳಗ್ಗೆ ಹಂಪಿ ವೀರುಪಾಕ್ಷೇಶ್ವರ ದೇವಸ್ಥಾನದಿಂದ ಪೂಜೆಯೊಂದಿಗೆ ಜ್ಯೋತಿ ಹೊರಟು ಬೆಳಗ್ಗೆ 8.30 ಕ್ಕೆ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಹಾಗೂ ಸೂಕ್ತ ಬಂದೂಬಸ್ತ್‍ನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಿದ್ದು ವಾಹನದ ವ್ಯವಸ್ಥೆ ಸಾರಿಗೆ ಇಲಾಖೆಯಿಂದ ಕೈಗೊಳ್ಳಲು ತಿಳಿಸಿದರು.
ಸಾಧಕ ಸಾಹಿತಿಗಳಿಗೆ ಸನ್ಮಾನ ಮತ್ತು ಕನ್ನಡ ಪುಸ್ತಕ ಮಾರಾಟ ಮಳಿಗೆ; ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮತ್ತು ಕವಿತೆಗಳು, ಕಥೆ, ಕಾದಂಬರಿಯನ್ನು ರಚಿಸಿದ ಸಾಹಿತಿಗಳಿಗೆ ಸನ್ಮಾನಿಸಲಾಗುತ್ತದೆ. ಮತ್ತು ಕನ್ನಡ ಪುಸ್ತಕ ಮಾರಾಟಕ್ಕೆ ಗಾಂಧಿಚೌಕ್ ಬಳಿ ಮಾರಾಟ ಮಳಿಗೆಯನ್ನು ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮತ್ತು ರಾಜ್ಯೋತ್ಸವದ ಅಂಗವಾಗಿ ಒಂದು ವಾರ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ; ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಕನ್ನಡ ನಾಡು, ನುಡಿ ಹಾಗೂ ಸಂಸ್ಕøತಿ ಕುರಿತಂತೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಸತಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ಮಕ್ಕಳಿಂದ ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲು ಉಪನಿರ್ದೇಶಕರಿಗೆ ತಿಳಿಸಿ ಶಾಲಾ ಮಕ್ಕಳಿಗೆ ರಾಜ್ಯೋತ್ಸವದ ಅಂಗವಾಗಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲು ಸೂಚಿಸಿದರು.
ಐದು ಕೋಟಿಯಲ್ಲಿ ರಂಗಮಂದಿರ; ವಿಜಯನಗರ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನಿಗಧಿತ ಸ್ಥಳದ ಕೊರತೆಯಿದ್ದು ಇದಕ್ಕೆ ಪ್ರತ್ಯೇಕ ಸ್ಥಳ ನೀಡಲು ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಜಿಲ್ಲಾಧಿಕಾರಿಯವರು ಐದು ಕೋಟಿಯಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇದÀಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದಿಂದ ಎರಡು ಕೋಟಿ ಮತ್ತು ಖನಿಜ ಪ್ರತಿಷ್ಠಾನ ನಿಧಿಯಿಂದ 3 ಕೋಟಿಯನ್ನು ಮೀಸಲಿರಿಸಿದ್ದು ನಿರ್ಮಾಣ ನಂತರ ಮುಂದಿನ ದಿನಗಳಲ್ಲಿ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಾಗಲಿದೆ. ಕನ್ನಡಾಸಕ್ತಸಂಘ, ಸಂಸ್ಥೆಗಳಿಗೂ ಒಂದು ಸ್ಥಳವನ್ನು ನಿಗಧಿ ಮಾಡಿಕೊಡಲಾಗುತ್ತದೆ ಎಂದರು.
ಕನ್ನಡದಲ್ಲಿರಲಿ ನಾಮಫಲಕ; ಸಂಘ, ಸಂಸ್ಥೆಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಹೆಸರನ್ನು ಕನ್ನಡದಲ್ಲಿರುವುದು ಕಡ್ಡಾಯವಾಗಿರುತ್ತದೆ. ಇದನ್ನು ಉಲ್ಲಂಘನೆ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.
ವೇದಿಕೆ ಸಿದ್ದತೆ ಸೇರಿದಂತೆ ವಿವಿಧ ಸಿದ್ದತೆಗಳನ್ನು ಕೈಗೊಳ್ಳಲು ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿ ಎಲ್ಲರೂ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಮತ್ತು ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಸಹಾಯಕಆಯುಕ್ತ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :-ಮೊಹಮ್ಮದ್ ಗೌಸ್