ಹೊಸಪೇಟೆ: ಜಾಗೃತಿ ಬೆಳಕು ಬಿಗ್ ಬ್ರೇಕಿಂಗ್
ನಾನು ಕೂಡ ವಿಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮೊಹಮ್ಮದ್.ಕೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ 20 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಹಾಗಾಗಿ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಶ್ರಮಿಸುತ್ತೇನೆ. ಯಾವುದೇ ಕಾರಣಕ್ಕೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಲವು ವರ್ಷಗಳಿಂದ ರೋಟರಿ ಸಂಸ್ಥೆಯಲ್ಲಿದ್ದುಕೊಂಡು ನೇತ್ರ ತಪಾಸಣೆ ಶಿಬಿರ, ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸೆಮಿನಾರಗಳನ್ನು ನಡೆಸಿದ್ದೇನೆ. ಹಾಗೂ ಬಳ್ಳಾರಿ ಜಿಲ್ಲಾ ಲೆಕ್ಕ ಪರಿಶೋಧಕರ ಸಂಘದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಮತ್ತು ಹೊಸಪೇಟೆಯ ಅಂಜುಮನ್ ಸಂಸ್ಥೆಯ ನಿರ್ದೇಶಕನಾಗಿ ಮತ್ತು ಅಂಜುಮನ್ ಆಸ್ಪತ್ರೆಯ ಚೇರಮನ್‌ನಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮೊದಲ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ವಿವರಿಸಿದರು.
ಸಾಮಾಜಿಕ ನ್ಯಾಯದಡಿ ನನಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಕೊಟ್ಟರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ 8ನೇ ವಾರ್ಡಿನ ಸದಸ್ಯ ಹುಲಗಪ್ಪ, ಮೊಹಮ್ಮದ್ ಪಾಶಾ ಮತ್ತು ವೆಂಕಟೇಶ ಇದ್ದರು.
ವರದಿ :-ಮೊಹಮ್ಮದ್ ಗೌಸ್