ಹೊಸಪೇಟೆ- ಜಾಗೃತಿ ಬೆಳಕು (ಬೀಗ್ ಬ್ರೇಕಿಂಗ್)
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ;ಪರಿಶೀಲನೆ.ಸಮ್ಮತಿ ಇದ್ರೇ ಇಂದಿರಾನಗರ ಸ್ಥಳಾಂತರಕ್ಕೆ ಸಿದ್ಧ:ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ!
ಸೆ.02 ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಹೊಸಪೇಟೆ ನಗರದ ಇಂದಿರಾನಗರ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೊದಲಿಗೆ ಹೊಸಪೇಟೆಯ 15ನೇ ವಾರ್ಡ್ ವ್ಯಾಪ್ತಿಯ ಇಂದಿರಾನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಇತ್ತೀಚಿಗೆ ಸುರಿದ ಮಳೆಯಿಂದಾಗಿ ರಾಜಕಾಲುವೆಯಿಂದ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿರುವುದನ್ನು ಪರಿಶೀಲಿಸಿದರು.ಹಾನಿಗೊಳಗಾದ ಇಂದಿರಾನಗರ ಬಡಾವಣೆಯ 64 ಮನೆಗಳ ಮಾಲೀಕರಿಗೆ ತುರ್ತು ಪರಿಹಾರವಾಗಿ ತಲಾ 10ಸಾವಿರ ರೂ.ಗಳ ಚೆಕ್ ಅನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.ಇಂದಿರಾನಗರದ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ರಾಜಕಾಲುವೆಯ ಸುತ್ತಮುತ್ತ ವಾಸವಾಗಿರುವವರೆಲ್ಲರೂ ಸಮ್ಮತಿಸಿದಲ್ಲಿ ತಮಗೆ ಹೊಸಪೇಟೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒಳಗೊಂಡ ಆಶ್ರಯ ಬಡಾವಣೆಯೊಂದನ್ನು ನಿರ್ಮಿಸಿ ಅಲ್ಲಿಗೆ ಹಸ್ತಾಂತರಿಸಲಾಗುವುದು;ಇಲ್ಲಿಯೇ ಇರಲು ಸಿದ್ದರಿದ್ದಲ್ಲಿ ನಿಯಮಾನುಸಾರ ಪರಿಹಾರ ಹಾಗೂ ಸ್ಲಂ ಆಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಬಡಾವಣೆಯ ಜನರು ತಾವೆಲ್ಲರೂ ಕುಳಿತುಕೊಂಡು ಚರ್ಚಿಸಿ ಒಮ್ಮತದ ನಿರ್ಧಾರ ತಿಳಿಸಿದಲ್ಲಿ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.ನಂತರ ಜಿಲ್ಲಾ ಉಸ್ತುವಾರಿ ಸಚಿವರು ಗಾಂಧಿನಗರ ಬಡಾವಣೆಗೂ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ,ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ,ತಹಸೀಲ್ದಾರ್ ವಿಶ್ವಜಿತ್ ಮೆಹತಾ,ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ವರದಿ :-ಮೊಹಮ್ಮದ್ ಗೌಸ್