ಹೊಸಪೇಟೆ(ವಿಜಯನಗರ) ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್ )
ನೂತನವಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಪರಿಸರ ಸ್ನೇಹಿ ಗಣೇಶಮೂರ್ತಿ ಬಳಸಿ ಸಂಭ್ರಮದಿಂದ ಮತ್ತು ಶಾಂತಿ-ಸೌಹಾರ್ದತೆಯಿಂದ ಆಚರಿಸೋಣ ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಆಗಿರುವ ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಅವರು ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೌರಿ-ಗಣೇಶ ಹಬ್ಬದ ಆಚರಣೆ ಹಿನ್ನೆಲೆ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದರು.
ಗರಿಷ್ಠ 5ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡಲಾಗುತ್ತಿದ್ದು, ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಲ್, ವಿದ್ಯುತ್ ಸಂಪರ್ಕ ಇನ್ನೂ ಮುಂತಾದ ಪರವಾನಿಗೆಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಿಗೆಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಿಒಪಿ ಅಥವಾ ಬಣ್ಣವನ್ನು ಬಳಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ನೇರವಾಗಿ ಕೆರೆ, ಹೊಂಡ, ನದಿಗಳಿಗೆ ಬಿಡುವುದನ್ನು ನಿಷೇಧಿಸಲಾಗಿದ್ದು, ಜಲಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜಿಸಲು 7 ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿಯೇ ವಿಸರ್ಜಿಸಬೇಕು ಎಂದು ಅವರು ಹೇಳಿದರು.
ಗಣೇಶ ಹಬ್ಬದ ಹಿನ್ನಲೆಯಲ್ಲಿ ಪ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್‍ಗಳನ್ನು ಬಳಸುವುದರ ಬದಲು ಬಟ್ಟೆಯಿಂದ ಮಾಡಿದ ಬ್ಯಾನರ್ ಗಳ ಬಳಕೆ ಮಾಡಬೇಕು. ಇದರಿಂದ ಸ್ಥಳೀಯ ಹೆಚ್ಚಿನ ಜನರಿಗೆ ಕೆಲಸ ಒದಗಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಿರಲು ಧ್ವನಿವರ್ಧಕಗಳನ್ನು ರಾತ್ರಿ 10ರಿಂದ ಬೆಳಗ್ಗೆ 6ಗಂಟೆಯವರೆಗೆ ನಿಷೇಧಿಸಲಾಗಿದೆ ಎಂದರು.
ವಿಶೇಷವಾಗಿ ಹೈ-ಟೆನ್ಷನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಉತ್ಸವಕ್ಕೆ ಮುಂಚಿತವಾಗಿ ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಜಿಲ್ಲೆ ಅಥವಾ ತಾಲ್ಲೂಕುಗಳಿಗೆ ಬೇರೆ ರಾಜ್ಯಗಳಿಂದ ಬರುವಂತಹ ಪಿ.ಓ.ಪಿ ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್ ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದ ಪ್ರಭಾರ ಜಿಲ್ಲಾಧಿಕಾರಿಗಳಾದ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಅವರು ಪಿ.ಓ.ಪಿ. ಮತ್ತು ರಾಸಾಯನಿಕ ಬಣ್ಣದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಯಾವುದೇ ಜಲಮೂಲಗಳಲ್ಲಿ ಅಂತಹ ವಿಗ್ರಹಗಳು ವಿಸರ್ಜನೆಯಾಗದ ರೀತಿಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳಿಗೆ ನಿರ್ದೇಶನ ನೀಡಿದರು.
ಉಲ್ಲಂಘನೆ ಮಾಡುವವರಿಗೆ ಐ.ಪಿ.ಸಿ. 1860 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ಬಣ್ಣ ರಹಿತ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸುವುದು. ಮಣ್ಣಿನ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕರ್ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ(ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಉತ್ಸವ ಮೂರ್ತಿ ಬಿಡುವ ಕೆರೆ, ಕಲ್ಯಾಣಿ ಮತ್ತು ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆಗಳಾದ ಬೆಳಕು, ರಕ್ಷಣೆ, ಸಹಾಯಕ ಸಿಬ್ಬಂದಿಗಳು, ಕುಡಿಯುವ ನೀರು, ಶೌಚಾಲಯ, ಸಾಲಾಗಿ ಬರಲು ಬ್ಯಾರಿಕೇಡ್ ವ್ಯವಸ್ಥೆ, ರಸ್ತೆ ಸಂಚಾರ ನಿಯಂತ್ರಣ, ಸೂಚನೆಗಳನ್ನು ನೀಡಲು ದ್ವನಿವರ್ಧಕಗಳ ವ್ಯವಸ್ಥೆ, ಆಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆ, ದೊಡ್ಡ ಗಣಪತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳಲ್ಲಿ ನೀರಿನ ವ್ಯವಸ್ಥೆ, ಬೃಹತ್ ಕ್ರೇನ್‍ಗಳು, ಕಾಲ ಕಾಲಕ್ಕೆ ಕಲ್ಯಾಣಿಗಳ ಸ್ವಚ್ಚತೆಗಾಗಿ ಜೆ.ಸಿ.ಬಿ.ಗಳು, ತುರ್ತು ನಿರ್ವಾಹಣಾ ಪಡೆಗಳ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ-ಕಾಲೇಜು, ಹಾಸ್ಟ್ಟೆಲ್‍ಗಳಲ್ಲಿ ಗಣಪತಿ ತರುವ ವೇಳೆ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಾರದು ಎಂದು ಅವರು ಸೂಚಿಸಿದರು.
*ಪಿಓಪಿ ತಯಾರಕರ ಮೇಲೆ ಕಠಿಣ ಕ್ರಮ: ಪಿ.ಓ.ಪಿ ಮೂರ್ತಿ ತಯಾರಿಸುವವರ ಮತ್ತು ಮಾರಾಟಗಾರರ ಮೇಲೆ ನಿಗಾವಹಿಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ ಪ್ರಭಾರ ಡಿಸಿ ಹರ್ಷಲ್ ಭೋಯರ್ ನಾರಾಯಣ ಅವರು ಪಿ.ಓ.ಪಿ. ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳಿಗೆ ವ್ಯಾಪಾರ ಲೈಸೆನ್ಸ್ ನೀಡದಿರಲು ಮತ್ತು ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿ/ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ತಕ್ಷಣ ಜರುಗಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ.ಆರುಣ್ ಅವರು ಮಾತನಾಡಿ ಗಣೇಶ ಮೂರ್ತಿಯನ್ನು ಯವುದೇ ಕಾರಣಕ್ಕೂ ತಿಂಗಳುಗಳವರೆಗೆ ಕೂರಿಸುವುದನ್ನು ಮತ್ತು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಮೊಬೈಲ್ ಬ್ಯಾಂಕ್‍ಗಳಲ್ಲಿ ಕಲ್ಯಾಣಿಗಳ ಪಕ್ಕದಲ್ಲಿ ಹಸಿಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ)ಗಳನ್ನು ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜನದ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು ಎಂದು ಅವರು ತಿಳಿಸಿದರು.
ವಾರ್ಡ್ ಮಟ್ಟದಲ್ಲಿ ಪೊಲೀಸ್ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿ ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮಕೈಗೊಳ್ಳುವುದು.
ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಟಿ.ಟಿ.ಎಂ.ಪಿ/ಇತರೆ ಸ್ಥಳೀಯ ಸಂಸ್ಥೆಗಳು ಮತ್ತು ಪೆÇೀಲೀಸ್ ಇಲಾಖೆಯಿಂದ ನಿಬಂಧನೆಗೊಳ್ಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಆಯೋಜಕರಿಂದ ಖಾತರಿಪಡಿಸಿಕೊಳ್ಳಲಾಗುವುದು.ಅಗತ್ಯವಿರುವ ಕಡೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎನ್.ಮಹೇಶ್‍ಬಾಬು, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ,ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ನಗರಸಭೆ ಪೌರಾಯುಕ್ತ ಮನೋಹರ ನಾಗರಾಜ, ಲೋಕೋಪಯೋಗಿ ಇಲಾಖೆಯ ಎಂಜನಿಯರ್ ರವೀಂದ್ರ ಕಟ್ಟಿ, ಹೊಸಪೇಟೆ ತಹಶೀಲ್ದಾರ್ ವಿಶ್ವಜಿತ್ ಮೇಹತಾ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಇದ್ದರು.
ವರದಿ :-ಮೊಹಮ್ಮದ್ ಗೌಸ್