ಹೊಸಪೇಟೆ(ವಿಜಯನಗರ), ಜಾಗೃತಿ ಬೆಳಕು
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ನಿಮಿತ್ತ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಜಿ.ನಾಗಲಾಪುರ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಆ.20ರಂದು ಗ್ರಾಮವಾಸ್ತವ್ಯ ನಡೆಸಲಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ವಿಶ್ವಜೀತ್ ಮೇಹತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ವಿಶ್ವಜಿತ್ ಮೆಹತಾ ಅವರು ಗ್ರಾಮವಾಸ್ತವ್ಯಕ್ಕೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ನೀಡಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಮತ್ತು ಜಿ.ನಾಗಲಾಪುರ ಗ್ರಾಮದಲ್ಲಿ ಪ್ರತಿಮನೆ ಬಾಗಿಲಿಗೆ ಹೋಗಿ ಸರ್ವೆ ಮಾಡಬೇಕು ಹಾಗೂ ಗ್ರಾಮಕ್ಕೆ ಭೇಟಿ ನೀಡಿ ಕೆಲಸಗಳನ್ನು ಪರಿಶೀಲಿಸಿ ಮಾಹಿತಿಯನ್ನು ತಹಶೀಲ್ದಾರ್ ಕಚೇರಿಗೆ ನೀಡಬೇಕು ಎಂದು ಹೇಳಿದರು.
ಯಾವುದಾದರು ತೊಂದರೆಗಳಿದ್ದಲ್ಲಿ ಸೂಕ್ತ ಕ್ರಮ ವಹಿಸಬೇಕು. ಗ್ರಾಮ ವಾಸ್ತವ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಕೃಷಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ ಮತ್ತು ಶಿಶು ಅಭಿವೃದ್ಧಿಯೋಜನೆ ಇಲಾಖೆಗಳು ಗ್ರಾಮ ವಾಸ್ತವ್ಯದಲ್ಲಿ ಸ್ಟಾಲ್‍ಗಳನ್ನು ನಿರ್ಮಾಣ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಮರಿಯಮ್ಮನಹಳ್ಳಿಯ ಕಂದಾಯ ನೀರಿಕ್ಷಕ ಅಂದಾನಿಗೌಡ, ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಗ್ರಾ.ಪಂ. ಪಿ.ಡಿ.ಓ ಇದ್ದರು.
ವರದಿ :-ಮೊಹಮ್ಮದ್ ಗೌಸ್