ಸಂಡೂರು/ಬಳ್ಳಾರಿ, ಜಾಗೃತಿ ಬೆಳಕು ನ್ಯೂಸ್
ರಸ್ತೆ ಅಪಘಾತಗಳಿಂದ ಉಂಟಾಗುತ್ತಿರುವ ಪ್ರಾಣಹಾನಿಯನ್ನು ತಡೆಗಟ್ಟುವ ಹಾಗೂ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಂಡೂರು ಪೊಲೀಸ್ ಠಾಣೆಯ ವತಿಯಿಂದ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.ಈ ಜಾಗೃತಿ ಅಭಿಯಾನಕ್ಕೆ ಸಂಡೂರು ವೃತ್ತ ನಿರೀಕ್ಷಕರಾದ ಮಹೇಶ್ ಗೌಡ ಚಾಲನೆ ನೀಡಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಯು ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚಾರ ನಡೆಸಿ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.ಅಭಿಯಾನದ ವೇಳೆ ಎಲ್ಲಾ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್‌ಗಳಲ್ಲಿ ಸಂಚರಿಸುವ ಮೂಲಕ “ಮೊದಲು ನಾವು ಪಾಲಿಸೋಣ, ನಂತರ ಸಾರ್ವಜನಿಕರಿಗೆ ತಿಳಿಸೋಣ” ಎಂಬ ಸಂದೇಶವನ್ನು ಸಾರಿದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂಭವಿಸಿದ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಮಹೇಶ್ ಗೌಡ ಅವರು,
“ಹೆಲ್ಮೆಟ್ ಕೇವಲ ದಂಡ ತಪ್ಪಿಸಿಕೊಳ್ಳಲು ಧರಿಸುವ ವಸ್ತುವಲ್ಲ, ಅದು ಜೀವ ರಕ್ಷಕ ಕವಚ. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರೂ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು” ಎಂದು ಹೇಳಿದರು.ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾಕೇಶ್ ಯು ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ.
ವಾಹನ ಸವಾರರು ವೇಗ ನಿಯಂತ್ರಣ, ಟ್ರಾಫಿಕ್ ನಿಯಮ ಪಾಲನೆ ಹಾಗೂ ಹೆಲ್ಮೆಟ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.ಪಟ್ಟಣದ ವಿವಿಧ ವೃತ್ತಗಳು, ಮುಖ್ಯರಸ್ತೆಗಳು ಹಾಗೂ ವ್ಯಾಪಾರ ಪ್ರದೇಶಗಳಲ್ಲಿ ನಡೆದ ಈ ಜಾಗೃತಿ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಸುರಕ್ಷಿತ ಸಂಚಾರದ ಮಹತ್ವವನ್ನು ವಿವರಿಸಿದರು.
ಸಾರ್ವಜನಿಕರು ಕೂಡ ಪೊಲೀಸರ ಈ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಅಭಿಯಾನದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸಂಚಾರ ನಿಯಂತ್ರಣ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.
ವರದಿ :ಕೆ ಮಹಮ್ಮದ್ ಖಾಸೀಂ
