Wednesday, March 4, 2026
Homeಹೊಸಪೇಟೆವಿದ್ಯಾರ್ಥಿಗಳ ಭವಿಷ್ಯಕ್ಕೆ ಮೊದಲ ಆದ್ಯತೆ : ಶಾಸಕ ಎಚ್ ಆರ್ ಗವಿಯಪ್ಪ,

ವಿದ್ಯಾರ್ಥಿಗಳ ಭವಿಷ್ಯಕ್ಕೆ ಮೊದಲ ಆದ್ಯತೆ : ಶಾಸಕ ಎಚ್ ಆರ್ ಗವಿಯಪ್ಪ,

ದ್ವಿತೀಯ ಪಿಯುಸಿ ಪರೀಕ್ಷೆಗೆ ಆದ್ಯತೆ: ಹೋಳಿ ಸಂಭ್ರಮಾಚರಣೆ 3 ಗಂಟೆ ತಡ – ಶಾಸಕ ಎಚ್ ಆರ್ ಗವಿಯಪ್ಪ ಮೆಚ್ಚುಗೆಗೆ ಪಾತ್ರ

ವಿಜಯನಗರ / ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್

ಮಾ, 4. ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಹೋಳಿ ಸಂಭ್ರಮಾಚರಣೆಯನ್ನು ಮೂರು ಗಂಟೆಗಳ ಕಾಲ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿರುವ ಶಾಸಕ ಹೆಚ್ ಆರ್ ಗವಿಯಪ್ಪ ಅವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆದ್ಯತೆ ನೀಡಿದ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಹೋಳಿ ಹಬ್ಬವನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಶಾಸಕರ ಪುತ್ರರಾದ ಎಚ್ ಜಿ ವಿರೂಪಾಕ್ಷ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಬೇಕಾಗಿತ್ತು.

ಆದರೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮನಗಂಡು ಕಾರ್ಯಕ್ರಮವನ್ನು 3 ಗಂಟೆಯ ನಂತರಕ್ಕೆ ಮುಂದೂಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿತ್ತು.

ವಿಜಯನಗರ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲೇ ಇರುವುದರಿಂದ, ಹೋಳಿ ಸಂಭ್ರಮಾಚರಣೆಯ ಧ್ವನಿವ್ಯವಸ್ಥೆ ಮತ್ತು ಜನಸಂದಣಿ ವಿದ್ಯಾರ್ಥಿಗಳ ಪರೀಕ್ಷೆಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.

ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾರ್ಯಕ್ರಮವನ್ನು ತಡವಾಗಿ ನಡೆಸಲು ನಿರ್ಧರಿಸಿರುವುದಾಗಿ ಶಾಸಕ ಗವಿಯಪ್ಪ ತಿಳಿಸಿದ್ದಾರೆ.“ವಿದ್ಯಾರ್ಥಿಗಳ ಭವಿಷ್ಯವೇ ಮೊದಲ ಆದ್ಯತೆ. ಹಬ್ಬ ಸಂಭ್ರಮಾಚರಣೆ ಬಳಿಕವೂ ನಡೆಯಬಹುದು, ಆದರೆ ಪರೀಕ್ಷೆ ಒಂದು ಮಹತ್ವದ ಹಂತ” ಎಂದು ಅವರು ತಮ್ಮ ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿ ಹಿತಾಸಕ್ತಿ ಕಾಪಾಡಿದ ಕ್ರಮ ಎಂದು ಪ್ರಶಂಸಿಸಿದ್ದಾರೆ.ಹಬ್ಬದ ಸಂಭ್ರಮ ಮತ್ತು ಶಿಕ್ಷಣದ ಮಹತ್ವ ಎರಡನ್ನೂ ಸಮತೋಲನಗೊಳಿಸುವ ಈ ಕ್ರಮವು ಜನಪ್ರತಿನಿಧಿಗಳ ಜವಾಬ್ದಾರಿಯುತ ನಡೆಗೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ಈ ತೀರ್ಮಾನವು ಸಮಾಜದ ಎಲ್ಲಾ ವಲಯಗಳಿಂದ ಶ್ಲಾಘನೀಯವಾಗಿದೆ.

ವರದಿ :ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news