ಹೆಣ್ಣು ಮಗು ಸ್ನೇಹಿ ವಿಜಯನಗರ ಜಿಲ್ಲೆಯಾಗಲಿ,

0
90

ಜಾಗೃತಿ ಬೆಳಕು ನ್ಯೂಸ್,ಹೊಸಪೇಟೆ (ವಿಜಯನಗರ)

ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಗಳ ಕುರಿತ
ಸಹಭಾಗೀದಾರರ ಕಾರ್ಯಾಗಾರ ಸಮಾರೋಪದಲ್ಲಿ ಶಶಿಧರ ಕೋಸಂಬೆ ಮನವಿ

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಂಬಂಧಿಸಿದ ವಿವಿಧ ಮೇಲ್ವಿಚಾರಣಾ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಿ ಅನಿಷ್ಠ ಹೆಣ್ಣು ಭ್ರೂಣ ಹತ್ಯೆ ಮೇಲೆ ನಿಯಂತ್ರಣ ವಹಿಸಿ, ಹೆಣ್ಣು ಮಗು ಸ್ನೇಹಿ ವಿಜಯನಗರ ಜಿಲ್ಲೆಯಾಗುವಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹೊಸಪೇಟೆ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಫೆ.15ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನುಬಾಹೀರ ಗರ್ಭಪಾತ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಸಾಕಷ್ಟು ಜಾಗೃತಿ ಮೂಡಿಸಿದಾಗ್ಯೂ ಬಾಲ್ಯವಿವಾಹ ಪ್ರಕರಣಗಳು ದಾಖಲಾಗುತ್ತಿವೆ. ಇದು ತಲೆ ತಗ್ಗಿಸುವಂತಹ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಕ್ಕಳ ಹಕ್ಕುಗಳ ರಕ್ಷಣೆಯ ಕಾಯಿದೆಯಗಳ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಹೆಣ್ಣು ಮಗುವಿನ ರಕ್ಷಣೆಗೆ ವಿಶೇಷ ಒತ್ತು ಕೊಡಬೇಕು ಎಂದು ಅವರು ಸಲಹೆ ಮಾಡಿದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮಾತನಾಡಿ, ಹೆಣ್ಣು ಮಗುವಿನ ರಕ್ಷಣೆಯ ಜೊತೆಗೆ ಬಾಲ್ಯದಿಂದಲೇ ಅವರಿಗೆ ಉತ್ತಮ ಸಂಸ್ಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಅಂಗನವಾಡಿ ಶಿಕ್ಷಣ ಹಂತದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೈಸ್ಕೂಲ್ ಹಾಗೂ ಕಾಲೇಜು ಹಂತದಲ್ಲಿ ಅಭಿಯಾನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಗಳ ಕುರಿತು ಅರಿವು ಮೂಡಿಸಬೇಕು. ಭ್ರೂಣಹತ್ಯೆ, ಬಾಲ್ಯವಿವಾಹ ತಡೆಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ವಿವಿಧ ಕಾಯ್ದೆಯ ಬಗ್ಗೆ ತರಬೇತಿ ಕಾರ್ಯಗಳು ನಿರಂತರ ನಡೆಯಬೇಕು. ಹೆಣ್ಣು ಮಗುವಿನ ರಕ್ಷಣೆಯ ಕಾರ್ಯದಲ್ಲಿ ನನ್ನ ಪಾತ್ರವೂ ಇದೆ ಎಂಬುದನ್ನು ಅರಿತು ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.
ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಕೊಣಿಲ ರಾಘವೇಂದ್ರ ಭಟ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಇನ್ನೀತರರು ಇದ್ದರು. ಚಿದಾನಂದ ಅವರು ನಿರೂಪಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here