ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಿಸಲು ಸಿದ್ದತೆ,ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ,

0
336

ಹೊಸಪೇಟೆ :-ಜಾಗೃತಿ ಬೆಳಕು (ಬಿಗ್ ಬ್ರೇಕಿಂಗ್)

ಕೋವಿಡ್ 2 ವರ್ಷಗಳ ನಂತರ ಪ್ರವಾಸೋದ್ಯಮ ಚೇತರಿಕೆ,
ಜನವರಿಯಲ್ಲಿ ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಿಸಲು ಸಿದ್ದತೆ, ಉಪ ಸಮಿತಿಗಳಿಂದ ವಾರದಲ್ಲಿ ಕ್ರಿಯಾ ಯೋಜನೆ ಸಲ್ಲಿಕೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್  ಸೂಚನೆ,

ಕಳೆದೆರಡು ವರ್ಷಗಳ ನಂತರ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು ಈ ವರ್ಷ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಇದನ್ನು ಜನರ ಉತ್ಸವನ್ನಾಗಿಸಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಅವರು ಶುಕ್ರವಾರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ 2023ರ ಜನವರಿ ತಿಂಗಳಲ್ಲಿ ಏರ್ಪಡಿಸಲು ಉದ್ದೇಶಿಸಿರುವ ಹಂಪಿ ಉತ್ಸವದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮೊದಲ ಸಿದ್ದತಾ ಸಭೆಯನ್ನು ನಡೆಸಲಾಗಿದ್ದು ಜನವರಿ 7, 8 ರಂದು ನಡೆಸಲು ದಿನಾಂಕವನ್ನು ನಿಗದಿ ಮಾಡಲಾಗಿದೆ.

ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿರುವುದರಿಂದ ದಿನಾಂಕದಲ್ಲಿ ಸ್ವಲ್ಪ ಬದಲಾವಣೆಗಳಾಗಲಿದ್ದು ಸಚಿವರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ಅಂತಿಮಗೊಳಿಸಲಾಗುತ್ತದೆ ಎಂದರು.

 ಚುನಾವಣೆ ಸಮೀಪಿಸುತ್ತಿದ್ದು ಇದರ ಸಿದ್ದತೆ ಜೊತೆಗೆ ಹಂಪಿ ಉತ್ಸವವನ್ನು ಮಾಡಬೇಕಾಗಿದ್ದು ಕೋವಿಡ್ ನಂತರ ಮತ್ತು ಜಿಲ್ಲೆ ರಚನೆಯಾದ ನಂತರ ಇದೇ ಮೊದಲು ಉತ್ಸವ ನಡೆಯುತ್ತಿದೆ. ಉತ್ಸವಕ್ಕೆ ಸಾಕಷ್ಟು ಪ್ರವಾಸಿಗರು ಹಾಗೂ ಸ್ಥಳೀಯರು ಭಾಗವಹಿಸುವ ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮುಂಚಿತವಾಗಿ ಕೈಗೊಂಡು ಯಶ್ವಸ್ವಿಯಾಗಿ ಮಾಡುವ ಮೂಲಕ ಇದು ಜನಮಾನಸದಲ್ಲಿ ಉಳಿಯುವಂತೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
 ಉಪ ಸಮಿತಿಗಳ ರಚನೆ, ವಾರದಲ್ಲಿ ಕ್ರಿಯಾ ಯೋಜನೆ ಸಲ್ಲಿಕೆಗೆ ಸೂಚನೆ; ಹಂಪಿ ಉತ್ಸವವನ್ನು ಯಶಸ್ವಿಯಾಗಿ ನಡೆಸಬೇಕೆನ್ನುವ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ 26 ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಸಮಿತಿಗಳು ಸಭೆಗಳನ್ನು ನಡೆಸಿ ಆಯಾ ಸಮಿತಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ವಾರದಲ್ಲಿ ನೀಡಬೇಕೆಂದು ಸೂಚನೆ ನೀಡಿದರು.

ಸಮಿತಿಗಳ ವಿವರ; ಸ್ವಾಗತ ಮತ್ತು ಶ್ರಷ್ಟಾಚಾರ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಪ್ರಚಾರ, ಜಾಹಿರಾತು ಮತ್ತು ಮಾಧ್ಯಮ ಸಮಿತಿ, ಆಹ್ವಾನ ಪತ್ರಿಕೆ, ಕರಪತ್ರ, ನೆನಪಿನ ಕಾಣಿಕೆ, ಪಾಸು, ಪ್ರಮಾಣ ಪತ್ರ, ಬ್ಯಾನರ್ ಸಮಿತಿ, ಮೂಲಭೂತ ಸೌಲಭ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮಿತಿ, ಆರೋಗ್ಯ ಮತ್ತು ನೈರ್ಮಲೀಕರಣ ಸಮಿತಿ, ಕಾನೂನು ಸುವ್ಯವಸ್ಥೆ ಸಮಿತಿ, ಪ್ರದರ್ಶನ ಸಮಿತಿ (ಕೈಗಾರಿಕೆ,
ಕೃಷಿ, ಕರಕುಶಲ, ಫಲಪುಷ್ಪ, ಆಹಾರ ಮೇಳ, ಮತ್ಸ್ಯ ಮೇಳ, ಪುಸ್ತಕ ಪ್ರದರ್ಶನ, ಚಿತ್ರಕಲೆ, ಶಿಲ್ಪಕಲಾ ಪ್ರದರ್ಶನ), ವೇದಿಕೆಗಳ ಸಮಿತಿ, ಕ್ರೀಡಾ ಸಮಿತಿ (ಕುಸ್ತಿ ಪಂದ್ಯಾವಳಿ, ಸಾಹಸ ಕ್ರೀಡೆಗಳು, ಗ್ರಾಮೀಣ ಕ್ರೀಡಾಕೂಟ), ಜಾನಪದ ವಾಹಿನಿ ಮೆರವಣಿಗೆ, ಶೋಭಾಯಾತ್ರೆ, ಪೂಜಾ ಸಮಿತಿ, ಅಗ್ನಿ ಶಾಮಕದಳ ವ್ಯವಸ್ಥೆ ಸಮಿತಿ, ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿ ಸಮಿತಿ, ಚಿತ್ರಕಲಾ ಶಿಬಿರ, ಪ್ರದರ್ಶನ ಸಮಿತಿ, ಶಿಲ್ಪಕಲೆ ಶಿಬಿರ, ಪ್ರದರ್ಶನ ಸಮಿತಿ, ಶಾಲಾ ಮಕ್ಕಳ ನೃತ್ಯ, ಚಿತ್ರಕಲಾ, ಪ್ರಬಂಧ ಸ್ಪರ್ಧೆ ಸಮಿತಿ, ಧ್ವನಿ-ಬೆಳಕು ವಿಜಯನಗರ ವೈಭವ ಕಾರ್ಯಕ್ರಮ ಸಮಿತಿ, ಕಲಾವಿದರ ಆಯ್ಕೆ ಸಮಿತಿ, ರಾಯಲ್ಸ್ ದರ್ಬಾರ್ ದ್ವನಿ ಬೆಳಕು ಕಾರ್ಯಕ್ರಮ ಸಮಿತಿ, ಪರಿಸರ ಸ್ನೇಹಿ ಹಸಿರು ಹಂಪಿ ಸಮಿತಿ, ತುಂಗಾ ಆರತಿ ಮಹೋತ್ಸವ ಸಮಿತಿ, ಹಂಪಿ ಬೈ ಸ್ಕೈ ಸಮಿತಿ, ವಸಂತ ವೈಭವ ಕಾರ್ಯಕ್ರಮ ಸಮಿತಿ, ಹಣಕಾಸು ಸಮಿತಿ,
ಎರಡು, ಮೂರು ವೇದಿಕೆಗಳು; ಉತ್ಸವದ ವೇಳೆ ಮುಖ್ಯ ವೇದಿಕೆ, ಸಮಾನಂತರ ವೇದಿಕೆ ಸೇರಿದಂತೆ ಎಷ್ಟು ವೇದಿಕೆಗಳಿರಬೇಕೆಂದು ಸಚಿವರು ಹಾಗೂ ಜನಪ್ರತಿಗಳೊಂದಿಗೆ ಚರ್ಚಿಸಿ ಸಂಪನ್ಮೂಲವನ್ನಾಧರಿಸಿ ನಿರ್ಧರಿಸಲಾಗುತ್ತದೆ ಎಂದರು.

 ತಾತ್ಕಾಲಿಕ, ಕಾಯಂ ಮೂಲಭೂತ ಸೌಕರ್ಯಕ್ಕೆ ಒತ್ತು; ಹಂಪಿ ವಿಶ್ವ ಪಾರಂಪರಿಕ ತಾಣವಾಗಿರುವುದರಿಂದ ಅಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕಾನೂನಿನ ತೊಡಕುಗಳಿವೆ. ಆದರೂ ಸಹ ವಿವಿಧ ಕಂಪನಿಗಳ ಸಿ.ಎಸ್.ಆರ್.ನಿಧಿಯಡಿ ಕುಡಿಯುವ ನೀರು ಸೇರಿದಂತೆ ಪ್ರತಿ ವರ್ಷ ಹಂಪಿ ಉತ್ಸವ ಆಚರಣೆಗೆ ಬೇಕಾದ ಕಾಯಂ ಅಲ್ಲದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇದಲ್ಲದೆ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಡುವ ಸ್ಮಾರಕಗಳನ್ನು ಹೊರತುಪಡಿಸಿ ರಾಜ್ಯ ಪುರಾತತ್ವ ಇಲಾಖೆಗೆ ಸೇರುವ ಸ್ಮಾರಕಗಳನ್ನು ಆಕರ್ಷಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದರು.

ಸಂಪನ್ಮೂಲ ಕ್ರೂಢೀಕರಣ; ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಳೆದ ಎರಡು ವರ್ಷ ತಲಾ ಎರಡು ಕೋಟಿ ಅನುದಾನ ನೀಡಿದ್ದು ಈ ವರ್ಷದ ಅನುದಾನ ಹಾಗೂ ಹೆಚ್ಚುವರಿಯಾಗಿ ಪಡೆಯುವ ಅನುದಾನ ಸೇರಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಬರುವ ಅನುದಾನ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ಕಂಪನಿಗಳಿಂದ ಪ್ರಾಯೋಜಕತ್ವ ಪಡೆಯುವ ಮೂಲಕ ಸಂಪನ್ಮೂಲವನ್ನು ಕ್ರೂಢೀಕರಿಸಿ ಅದ್ದೂರಿ ಉತ್ಸವ ಆಚರಿಸಲಾಗುತ್ತದೆ ಎಂದರು.
ಸ್ಥಳೀಯ ಕಲಾವಿದರಿಗೂ ಆದ್ಯತೆ; ಹಂಪಿಗೆ ದೇಶ, ವಿದೇಶ ಹಾಗೂ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಉತ್ಸವದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರ ಜೊತೆಗೆ ಸ್ಥಳೀಯವಾಗಿಯು ಶೇ 50 ಕ್ಕಿಂತಲೂ ಹೆಚ್ಚು ಕಲಾವಿದರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ 150 ಕ್ಕಿಂತಲೂ ಹೆಚ್ಚಿನ ಅರ್ಜಿಗಳು ನನ್ನ ಕಚೇರಿಗೆ ಸಲ್ಲಿಕೆಯಾಗಿದ್ದು ಅಧಿಕಾರಿಗಳ ಸಮಿತಿಯು ಪರಿಶೀಲನೆ ನಡೆಸಿ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವರು ಎಂದರು.

 ಹಂಪಿ ಉತ್ಸವದಲ್ಲಿ ಕರಕುಶಲ ಪ್ರದರ್ಶನ, ಸಾಹಸ ಕ್ರೀಡೆಗಳು, ಫಲಪುಷ್ಪ ಪ್ರದರ್ಶನ, ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ, ಧ್ವನಿ ಬೆಳಕು, ಹಂಪಿ ಬೈ ಸ್ಕೈ, ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಇದಲ್ಲದೆ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ ಎಂದರು.
 ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here