ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ಜೀವನದ ಒಂದು ಪ್ರಕ್ರಿಯೆ: ಆಚಾರ್ಯ ಚಂದ್ರಮೋಹನ್!

0
182

ಹೊಸಪೇಟೆ,ನ್ಯೂಸ್ (ವಿಜಯನಗರ) ಜಾಗೃತಿ ಬೆಳಕು

ಯೋಗ ಎಂದರೆ ಕೇವಲ ಅದು ವ್ಯಾಯಾಮವಲ್ಲ, ಜೀವನದ ಒಂದು ಪ್ರಕ್ರಿಯೆಯಾಗಿದೆ. ನಮ್ಮ ಜೀವನ ಯೋಗದ ಮೂರು ಧಾರದ ಸ್ತಂಭಗಳಾದ ಆಹಾರ, ನಿದ್ದೆ ಹಾಗೂ ಬ್ರಹ್ಮಚರ್ಯದ ವ್ಯವಸ್ಥೆಯ ಮೇಲೆ ನಿಂತಿದೆ. ನಾವೆಲ್ಲರೂ ನಿತ್ಯ ಜೀವನದಲ್ಲಿ ಸಾತ್ವಿಕ ಆಹಾರ ಪದ್ದತಿ, ಸರಿಯಾದ ರೀತಿಯಲ್ಲಿ ನಿದ್ದೆ ವ್ಯವಸ್ಥೆ ಹಾಗೂ ಅಹಿಂಸಾತ್ಮಕ ಗುಣಗಳನ್ನು ನಾವು ರೂಪಿಸಿಕೊಂಡಾಗ ನಮ್ಮ ಜೀವನ ಸುಂದರವಾಗಿರುತ್ತದೆಂದು ಹರಿದ್ವಾರದ ಪತಂಜಲಿ ಯೋಗದ ಆಚಾರ್ಯ ಚಂದ್ರಮೋಹನ್ ಅವರು ಅಭಿಪ್ರಾಯಪಟ್ಟರು.


ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಯೋಗ ಆಧ್ಯಯನ ವಿಭಾಗದಿಂದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಪ್ರಸ್ತುತ ಸಂದರ್ಭದಲ್ಲಿ ಯೋಗಶಾಸ್ತ್ರದ ಮಹತ್ವ ಎನ್ನುವ ವಿಷಯದ ಕುರಿತ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗದ ಮೂಲ ಉದ್ದೇಶ ಸರಿಯಾದ ಜೀವನ ಕ್ರಮ, ಸತ್ಯಾಂಶ ಮತ್ತು ಅಹಿಂಸಾತ್ಮಕ ತತ್ವಗಳ ಆಧಾರದ ಮೇಲೆ ಯಾವುದೇ ಪ್ರಾಣಿ ಸಂಕುಲಕ್ಕೆ ಹಾನಿ ಉಂಟು ಮಾಡಬಾರದು ಎನ್ನುವುದೇ ಯೋಗದ ಮೂಲ ಆಶಯವಾಗಿದೆ ಎಂದು ತಿಳಿಸಿದರು.
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತತ್ವಶಾಸ್ತ್ರದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಐ.ಎಸ್. ಕುಂಬಾರ ಅವರು ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಯೋಗಶಾಸ್ತ್ರದ ಮಹತ್ವ ಎನ್ನುವ ವಿಷಯದ ಉಪನ್ಯಾಸ ನೀಡಿ ಮಾತನಾಡಿ ಯೋಗದ ವ್ಯಾಪ್ತಿ ಕೇವಲ ಒಂದು ಚೌಕಟ್ಟಿಗೆ ಸೀಮಿತಗೊಂಡಿಲ್ಲ, ಅದು ಜನಸಾಮಾನ್ಯರ ಜೀವನದಲ್ಲಿ ವಿಸ್ತಾರಗೊಂಡಿದೆ. ಇನ್ನೂ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯ ವಾಕ್ಯ ‘ಮಾನವೀಯತೆಗಾಗಿ ಯೋಗ’ ಎನ್ನುವುದು. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸಾಮಾಜಿಕ ಪಿಡುಗುಗಳು ನಮ್ಮನ್ನು ಕಾಡುತ್ತಿವೆ, ಆದರೆ ನಮ್ಮಲ್ಲಿ ಯೋಗ ಪ್ರಸ್ತುತವಾಗಿದ್ದರೂ ಅವುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲವೆಂದರೆ ಅದರಲ್ಲಿ ಏನೋ ಗೊಂದಲಗಳಿವೆ ಎಂದರ್ಥ . ಈ ಕಾರಣಕ್ಕಾಗಿ ಯೋಗ ಅಧ್ಯಯನವನ್ನು ಕನಿಷ್ಟ ಮಟ್ಟದಲ್ಲಿ ತಿಳಿದುಕೊಳ್ಳವ ಬದಲು ಯೋಗ ಅಧ್ಯಯನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದಾಗ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬಹುದು ಹಾಗೂ ಯೋಗದ ಅಧ್ಯಯನದಿಂದ ಮಾನವೀಯ ಮೌಲ್ಯಗಳು ನಮ್ಮಲ್ಲಿ ವ್ಯಕ್ತಿಗತಗೊಳ್ಳುತ್ತವೆಂದು ಹೇಳಿದರು.
ಇನ್ನು ಯಾವುದೇ ವಿಚಾರವನ್ನು ನಾವು ಭಕ್ತಿಯಿಂದ ಹೃದಯದಲ್ಲಿ ವಿಚಾರಧಾರೆಗಳನ್ನು ಧಾರಣೆ ಮಾಡಿಕೊಂಡಾಗ ಧ್ಯಾನ ಫಲ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿವಿ ಕುಲಪತಿಗಳಾದ ಡಾ. ಸ.ಚಿ. ರಮೇಶ ಅವರು ಮಾತನಾಡಿ ನಮ್ಮ ಪೂರ್ವಜರ ಜ್ಞಾನವನ್ನು ಸಮಾಜ ಕಲ್ಯಾಣಕ್ಕೆ ದಾರಿದೀಪದಂತೆ ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ರೂಢಿಸಿಕೊಂಡಾಗ ಜೀವನದಲ್ಲಿ ಏನಾದರೂ ಸಾüದಿಸಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ಮನುಷ್ಯರ ಕೈಯಲ್ಲಿ ಅಸಾಧ್ಯವಾದ ವಿಷಯ ಯಾವುದು ಇಲ್ಲ, ಆದರೆ ನಾವು ಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಯೋಗಿ ಆಗದೆ ಯಾವುದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ;ನಮ್ಮ ಜೀವನವನ್ನು ಶ್ರದ್ಧಾಭಕ್ತಿಯಿಂದ ಶಿಸ್ತು ಕ್ರಮಗಳನ್ನು ಅಪಾರವಾಗಿ ರೂಢಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು. ಇನ್ನೂ ರಾಕ್ಷಸ ಗುಣಗಳನ್ನು ತ್ಯಜಿಸಿ ದೈವಿ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ನಾವು ಪರಿಸರದಲ್ಲಿ ವಾಸ ಮಾಡುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು. ಪ್ರಕೃತಿಯೊಡನೆ ನಮ್ಮ ದಿನಚರಿ ಆರಂಭವಾಗುತ್ತದೆ ಎಂದು ತಿಳಿಸಿದರು. ಮುಖ್ಯವಾಗಿ ಯೋಗದಿಂದ ಮಾನಸಿಕವಾಗಿ, ಭೌತಿಕವಾಗಿ ಹಾಗೂ ದೈಹಿಕವಾಗಿ ಸದೃಡವಾಗುತ್ತೇವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯೋಗ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿರಾದ ಡಾ. ಎ. ಸುಬ್ಬಣ್ಣ ರೈ, ಕನ್ನಡ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಶೋಧನಾ ವಿದ್ಯಾರ್ಥಿಯಾದ ನಾಗಪ್ಪ .ಕೆ ನಿರೂಪಿಸಿದರು. ಕೃಷ್ಣ ವಂದಿಸಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here