ಪರಿಸರ ಸಂರಕ್ಷಣೆ ಜನಸಾಮಾನ್ಯರ ಹೊಣೆ : ಭೀಮರಾಯ

0
88

ಹೊಸಪೇಟೆ :- ವಿಜಯನಗರ -ಜಾಗೃತಿ ಬೆಳಕು ನ್ಯೂಸ್

ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಗೆ ಸೀಮಿತವಾಗಿಲ್ಲ, ಅದು ಪ್ರತಿಯೊಬ್ಬ ನಾಗರಿಕರ ಮೂಲಭೂತ ಕರ್ತವ್ಯವಾಗಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದ ವಲಯ ಅರಣ್ಯ ಅಧಿಕಾರಿಗಳಾದ ಭೀಮರಾಯ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅನನ್ಯ ಬಾಲಕರ ವಸತಿ ನಿಲಯದಲ್ಲಿ ದಿನಾಂಕ ೧೧.೬.೨೦೨೪ರಂದು ವಿಶ್ವ ಪರಿಸರ ದಿನಾಚರಣೆಯ ಹಸಿರು ಉತ್ಸವ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಅನೇಕ ದುಷ್ಪರಿಣಾಮಗಳನ್ನು ಅನುಭವಿಸಲಾಗಿದ್ದು, ಇಂತಹ ಸಮಸ್ಯೆಗಳನ್ನು ನಾವು ಗಿಡ ಮರಗಳನ್ನು ಬೆಳಸುವ ಮೂಲಕ ನಿರ್ವಹಿಸಲು ಸಾಧ್ಯ ಎಂದರು. ಇನ್ನೂ ನಮ್ಮ ಬಿಡುವಿನ ಸಮಯದಲ್ಲಿ ಗಿಡ ಮರಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ, ಅವುಗಳ ಸಂರಕ್ಷಣೆ, ಜನಸಾಮಾನ್ಯರಿಗೆ ಪರಿಸರದ ಬಗ್ಗೆ ಕಾಳಜಿ ಅರಿವು ಮೂಡಿಸುವ ಹೊಣೆ ನಮ್ಮ ಮೇಲಿದೆ ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಲತಾ ರೋಹಿಣ ಮಠ ಅವರು ಮಾತನಾಡಿ ಗಿಡ ಮರಗಳನ್ನು ನೆಡುವುದು ಮುಖ್ಯವಲ್ಲ, ಅವುಗಳ ಪೋಷಣೆ ಬಹಳ ಮುಖ್ಯ. ನಾವು ಪ್ರಚಾರಗೋಸ್ಕರ ಕಾರ್ಯಕ್ರಮಗಳನ್ನು ಮಾಡದೆ ಗಿಡಮರಗಳನ್ನು ನಮ್ಮ ಮಕ್ಕಳಂತೆ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನನ್ಯ ಬಾಲಕರ ವಸತಿ ನಿಲಯದ ನಿಲಯಪಾಲಕರಾದ ಹನುಮಂತಪ್ಪ ಸಂಕನೂರು ಮಾತನಾಡುತ್ತಾ ನಮ್ಮೆಲ್ಲರಿಗೆ ತಾಯಿ ಇಬ್ಬರಿದ್ದು, ಒಂದು ಜನ್ಮ ನೀಡಿದವರು, ಇನ್ನೊಬ್ಬರು ನಮ್ಮ ಸುತ್ತಮುತ್ತಲಿನ ಪರಿಸರ. ಜನ್ಮ ನೀಡಿದಾಕಿಗೆ ಮಾತು ಬರುತ್ತದೆ ಅವರು ಏನಾದರೂ ಬೇಕಾದರೆ ಕೇಳುತ್ತಾರೆ. ಆದರೆ ಪರಿಸರ ಕೇಳುವುದಿಲ್ಲ ಇದನ್ನು ಅರಿತುಕೊಂಡು ನಾವು ಜವಾಬ್ದಾರಿಯುತವಾಗಿ ಗಿಡ ಮರಗಳಿಗೆ ನೀರುಣ ಸುವುದು ಪೋಷಕಾಂಶ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಇದರಿಂದ ಉತ್ತಮ ಆರೋಗ್ಯ ಕೂಡ ಸಿಗುತ್ತದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದ್ದು, ಇದು ಕೇವಲ ಸಂಕೇತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಗಿಡವನ್ನು ದತ್ತು ತೆಗೆದುಕೊಂಡು ಅದರ ಪಾಲನೆ ಪೋಷಣೆ ಮಾಡಬೇಕು. ಇದರ ಮೂಲಕ ಜನಸಾಮಾನ್ಯರಿಗೆ ಪರಿಸರ ಆಗು ಹೋಗುಗಳನ್ನು ತಿಳಿಸಿ ಅವರಿಗೆ ಸೂಕ್ತವಾಗಿ ಜಾಗೃತಿ ಮೂಡಿಸುವ ಅಗತ್ಯತೆಯಿದೆ ಎಂದು ತಿಳಿಸಿದರು.
ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ಎನ್. ಚಿನ್ನಸ್ವಾಮಿ ಸೋಸಲೆ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್, ಪ್ರಸಾರಾಂಗ ಸಹಾಯಕ ನಿರ್ದೇಶಕರಾದ ಎಸ್.ಎಚ್. ಶಿವಪ್ರಕಾಶ್, ತೋಟಗಾರಿಕೆ ವಿಭಾಗದ ಸಹಾಯಕ ತೋಟಗಾರಿಕೆ ಅಧಿಕಾರಿಯಾದ ಬೀರಪ್ಪ, ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಕೊಟ್ರೇಶ್, ನಿಲಯ ಪಾಲಕರಾದ ಸಂಗಮೇಶ್ ವೇದಿಕೆಯ ಮೇಲೆ ಆಸೀನರಾಗಿದ್ದರು. ಸಂಶೋಧನ ವಿದ್ಯಾರ್ಥಿಯಾದ ಅನಿಲ್‌ಕುಮಾರ್ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಸಿದ್ದರಾಮಪ್ಪ ನಿರೂಪಿಸಿದರು, ದೊಡ್ಡಬಸಪ್ಪ ಎ.ಕೆ ವಂದಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಉತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ವಲಯ ಅರಣ್ಯ ಅಧಿಕಾರಿ (RFO) ಭೀಮರಾಯ ಅವರು ಹಸಿರು ಉತ್ಸವ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here