ಗುಡೇಕೋಟೆ ಉತ್ಸವ ನಡೆಸಿದ್ದು ಸಂತೋಷ ತಂದಿದೆ: ಶಾಸಕರಾದ ಡಾ.ಶ್ರೀನಿವಾಸ ಎನ್.ಟಿ.

0
232

ಜಾಗೃತಿ ಬೆಳಕು ನ್ಯೂಸ್ ಹೊಸಪೇಟೆ (ವಿಜಯನಗರ)

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಫೆ.24 ಮತ್ತು ಫೆ.25ರಂದು ಎರಡು ದಿನಗಳ ನಿಗದಿಯಾಗಿದ್ದ ಗುಡೆಗೋಟೆ ಉತ್ಸವಕ್ಕೆ ಫೆ.24ರ ಸಂಜೆ ವಿದ್ಯುಕ್ತ ಚಾಲನೆ ಸಿಕ್ಕಿತು.
ಗುಡೇಕೋಟೆಯ ಒಣಿಕೆ ಓಬವ್ವ ವೇದಿಕೆಯಲ್ಲಿ ಧಾನ್ಯಗಳನ್ನು ಮಡಿಕೆಗೆ ಹಾಕುವುದರ ಮೂಲಕ ಕೂಡ್ಲಿಗಿ ಶಾಸಕರಾದ ಡಾ.ಶ್ರೀನಿವಾಸ್‌ಎನ್.ಟಿ. ಅವರು ಉತ್ಸವಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ನುಡಿದಂತೆ ನಡೆದ ಶಾಸಕರೆಂದು ತಮಗೆ ಸಾರ್ವಜನಿಕರು ಒಪ್ಪಿಕೊಂಡಿದ್ದು ಇದರಿಂದ ತಮಗೆ ಬಹಳ ಸಂತೋಷವಾಗಿದೆ. ಗುಡೇಕೋಟೆ ಉತ್ಸವವು ದಾಖಲೆಯ ರೀತಿಯಲ್ಲಿ ನಡೆಯುವಂತೆ ಸಾರ್ವಜನಿಕರು ತಿಳಿಸಿದ್ದರು. ಅದರಂತೆ ಉತ್ಸವ ನಡೆಸಲಾಗಿದೆ ಎಂದರು. ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ. ಗುಡೇಕೋಟೆಯನ್ನು ಪ್ರವಾಸಿ ತಾಣನ್ನಾಗಿಸಲು ಪ್ರಯತ್ನಿಸುವೆ. ಗುಡೇಕೋಟೆ ಅಭಿವೃದ್ದಿಗೆ ಸರ್ಕಾರದಿಂದ 3 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು. ಗುಡೇಕೋಟೆಯ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆ ಏರಬೇಕು ಎಂಬುದು ತಮ್ಮ ಬಹುದೊಡ್ಡ ಆಶಯವಾಗಿದೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ ಅವರು ಮಾತನಾಡಿ, ಗುಡೇಕೋಟೆ ಉತ್ಸವವು ಹಂಪಿ ಉತ್ಸವವನ್ನು ನೆನಪಿಸುವ ಹಾಗೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಇದರ ರೂವಾರಿಯಾದ ಶಾಸಕರ ಶ್ರಮವು ಶ್ಲಾಘನೀಯವಾಗಿದೆ ಎಂದರು. ವೀರವನಿತೆ ಒನಕೆ ಓಬವ್ವನ ಶೌರ್ಯ ಸಾಹಸ ಹೇಗೆ ಅಜರಾಮರವಾಗಿದೆಯೋ ಅದೆ ರೀತಿ ಈ ಉತ್ಸವವು ಇತಿಹಾಸ ಪುಟಗಳಲ್ಲಿ ದಾಖಲಾಗುವುದು ಎಂದು ತಿಳಿಸಿದರು.

ವಿಶೇಷ ಆಹ್ವಾನಿತರಾಗಿದ್ದ ಮಾತಾ ಮಂಜಮ್ಮ ಜೋಗತಿ ಅವರು ಮಾತನಾಡಿ, ಹಂಪಿ ಉತ್ಸವವನ್ನು ಎಂ.ಪಿ.ಪ್ರಕಾಶ ಅವರು ಆರಂಭಿಸಿದ್ದರು. ಹಾಗೇಯೆ ಗುಡೇಕೋಟೆ ಉತ್ಸವವನ್ನು ಡಾ.ಶ್ರೀನಿವಾಸ್ ಎನ್.ಟಿ. ಅವರು ಆರಂಭಿಸಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ. ಇದು ತಾಲೂಕಿನ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕಅಧಿಕಾರಿ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿಬಾಬು ಬಿ.ಎಲ್., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಕ್ರಂ ಷಾ ಅಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಸಿದ್ದಲಿಂಗೇಶ ರಂಗಣ್ಣನವರ, ಕೂಡ್ಲಿಗಿ ತಹಸೀಲ್ದಾರರಾದ ರಾಜು ಫಿರಂಗಿ, ಕೂಡ್ಲಿಗಿಯ ಹಿರೇಮಠ ಸಂಸ್ಥಾನದ ಗುರುಗಳಾದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು, ಒನಕೆ ಓಬವ್ವ ವಂಶಸ್ಥರಾದ ರಾಜಣ್ಣ, ಪಾಳೆಗಾರ ವಂಶಸ್ಥರಾದ ಶಿವರಾಜ ವರ್ಮ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here