ಹೊಸಪೇಟೆ :- ಜಾಗೃತಿ ಬೆಳಕು ಬಿಗ್ ಬ್ರೇಕಿಂಗ್
ದಾಸವಾಣಿಯಿಂದ ಮನುಕುಲಕ್ಕೆ ಒಳಿತಾಗುವ ಅಂಶ: ಎಸಿ ಸಿದ್ಧರಾಮೇಶ್ವರ
ಜ,21 ಪುರಂದರದಾಸರು ರಚಿಸಿರುವ ಕೀರ್ತನೆಗಳಲ್ಲಿ ಮನುಕುಲಕ್ಕೆ ಒಳಿತಾಗುವ ಅಂಶಗಳೆ ತುಂಬಿಕೊಂಡಿವೆ ಎಂದು ಹೊಸಪೇಟೆ ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧರಾಮೇಶ್ವರ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವವಿಖ್ಯಾತ ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಬಳಿಯ ಬ್ರಹ್ಮವಿಠ್ಠಲ ಮಂಟಪದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸರ ಆರಾಧನೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಿದ್ಧರಾಮೇಶ್ವರ ಅವರು ಶ್ರೀ ಪುರಂದರದಾಸರ ಭಾವಚಿತ್ರಕ್ಕೆ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಹಂಪಿಯ ಸ್ಮಾರಕಗಳ ನಡುವೆ
ಪುರಂದರದಾಸರು ಜೀವಿಸಿದ್ದ ಹಂಪಿಯಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆರಾಧನೆ ಅರ್ಥಪೂರ್ಣವಾಗಿ ನಡೆದಿದೆ.
ಸಂಗೀತದಿಂದ ಚಿಕಿತ್ಸಕ ಗುಣವಿದೆ. ದಾಸರು ರಚಿಸಿದ ಕೀರ್ತನೆಗಳು ಅರ್ಥಗರ್ಭಿತವಾಗಿರುತ್ತವೆ. ದಾಸಸಾಹಿತ್ಯ ಪ್ರಸ್ತುತ ಕಾಲಘಟ್ಟಕ್ಕೂ ಅನ್ವಯವಾಗುವ ವಿಚಾರಗಳಿವೆ. ಕೀರ್ತನೆಗಳನ್ನು ದಾಸವಾಣಿಯಂತೆ ಅನುಸರಿಸಲು ನಾವು ಸಿದ್ಧರಾಗಬೇಕು ಎಂದರು.
ಆರಾಧನೋತ್ಸವ ಅಂಗವಾಗಿ ಪಂಡಿತ್ ನಾಗರಾಜ್ ಹವಾಲ್ದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಧಾ ರಂಗನಾಥ್ ಅವರಿಂದ ಕರ್ನಾಟಕ ಸಂಗೀತ ಗಾಯನ, ರೂಪಾಲಿಕಾ ತಂಡದಿಂದ ಸಮೂಹ ನೃತ್ಯ, ಅಮೃತ ತಂಡದಿಂದ ನೃತ್ಯ ರೂಪಕ, ಪಿ.ಭವ್ಯ ಅವರಿಂದ ಗಿರಿಜಾ ಕಲ್ಯಾಣ ನೃತ್ಯ ಹಾಗೂ ಇಂದ್ರಾಣಿ ತಂಡದಿಂದ ಸಮೂಹ ನೃತ್ಯ ಪ್ರದರ್ಶನ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಆನೆಗುಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ರಾಜಮಾತೆ ಚಂದ್ರಕಾಂತಾ ದೇವಿ ಇದ್ದರು.
ವರದಿ :-ಮೊಹಮ್ಮದ್ ಗೌಸ್