ಜೀತ ಪದ್ಧತಿ ನಿರ್ಮೂಲನೆಗೆ ಅರಿವು ಅತ್ಯವಶ್ಯಕ: ಹೇಮಲತಾ ಹುಲ್ಲೂರ,

0
107

ಜಾಗೃತಿ ಬೆಳಕು ನ್ಯೂಸ್, ಹೊಸಪೇಟೆ, (ವಿಜಯನಗರ)

ಜೀತ ಪದ್ಧತಿ ನಿರ್ಮೂಲನೆಗಾಗಿ ಅರಿವು ಅತ್ಯವಶ್ಯಕವಾಗಿದೆ ಎಂದು ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹೇಮಲತಾ ಬಿ.ಹುಲ್ಲೂರ ಅವರು ಹೇಳಿದರು.

ಹೊಸಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಕಂದಾಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 9ರಂದು ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀತ ಪದ್ಧತಿ ಎನ್ನುವುದು ಒಂದು ಅನಿಷ್ಟ ಪದ್ಧತಿಯಾಗಿದ್ದು, ಇನ್ನೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಜೀತ ಪದ್ಧತಿಯಿಂದ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಆಚರಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಕಿಶನ್ ಬಿ.ಮಾಡಲಗಿ ಅವರು ಮಾತನಾಡಿ, ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರು ಸಹ ಜೀತ ಪದ್ಧತಿಯು ಇನ್ನೂ ಕೆಲವು ಕಡೆ ಜೀವಂತವಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ನಮ್ಮ ಭಾರತ ಸಂವಿಧಾನಲ್ಲಿ ಆರ್ಟಿಕಲ್ 14ರ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಯಾವುದೇ ರೀತಿಯ ಜಾತಿ ಭೇಧ ಮಾಡುವಂತಿಲ್ಲ ಎಂದು ಹೇಳಿದರು.
2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಂಜೀವ್ ಕುಮಾರ ಜಿ ಅವರು ಮಾತನಾಡಿ, ಜೀತ ಪದ್ಧತಿಯನ್ನು ಕಾನೂನು ಅಡಿಯಲ್ಲಿ ಮುಕ್ತವಾಗಿ ನಿರ್ಮೂಲನೆ ಮಾಡಲಾಗಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಇಂತಹ ಪದ್ಧತಿ ಎಲ್ಲಾದರು ಕಂಡು ಬಂದಲ್ಲಿ ನ್ಯಾಯಾಲಯಕ್ಕೆ ಅಥವಾ ಪೋಲಿಸ್ ಠಾಣೆಗೆ ದೂರು ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸಪೇಟೆ ತಹಶೀಲ್ದಾರರಾದ ಶೃತಿ ಎಂ.ಎಂ ಅವರು ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ 3ನೇ ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚೈತ್ರ ಜೆ., ಜಿಲ್ಲಾ ಕಾರ್ಮಿಕಾಧಿಕಾರಿಗಳಾದ ಸೂರಪ್ಪ ಡೊಂಬರ ಮತ್ತೂರ, ವಕೀಲರ ಸಂಘದ ಅಧ್ಯಕ್ಷರಾದ ಕೆ ಪ್ರಹ್ಲಾದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪಿ ಶ್ರೀನಿವಾಸ ಮೂರ್ತಿ, ಹೊಸಪೇಟೆ ಪಟ್ಟಣ ಪೋಲಿಸ್ ಠಾಣೆಯ ಪಿ.ಎಸ್.ಐ ಮುನಿರತ್ನಂ ಸೇರಿದಂತೆ ಅಧಿಕಾರಿಗಳು ಹಾಗೂ ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here