ಜಾಗೃತಿ ಬೆಳಕು ನ್ಯೂಸ್,ಹೊಸಪೇಟೆ (ವಿಜಯನಗರ)
ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ
ಬೇಸಿಗೆಯ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಮೇವಿನ ಲಭ್ಯತೆಗೆ ಗಮನ ಹರಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದರು.
ಜಿಲ್ಲಾಡಳಿತದ ಭವನದಲ್ಲಿನ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಫೆ.15ರಂದು ನಡೆದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಹಸೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ತಾಲೂಕುವಾರು ಕುಡಿಯುವ ನೀರಿನ ಸರಬರಾಜು ಸ್ಥಿತಿಗತಿ ಹಾಗೂ ಮೇವಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಬೇಸಿಗೆಯ ಬಿಸಿಲು ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಯಾವುದೇ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆಯಾಗಬೇಕು. ಟ್ಯಾಂಕರ್ ಬಾಡಿಗೆ ಪಡೆದಿರುವುದಕ್ಕೆ ಮತ್ತು ಖಾಸಗಿ ಬೋರವೆಲ್ ನೀಡಿದ ಮಾಲೀಕರಿಗೆ ಸಕಾಲಕ್ಕೆ ಬಿಲ್ಲು ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಬೇಸಿಗೆಯ ಸಂದರ್ಭದಲ್ಲಿ ಸಹ ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಕೆಯಾಗಬೇಕು. ಅವಶ್ಯಕತೆ ಇದ್ದ ಸಂದರ್ಭದಲ್ಲಿ ಮೇವು ಖರೀದಿಗೆ ಅನುಕೂಲವಾಗುವಂತೆ ಟೆಂಡರ್ ಸೇರಿದಂತೆ ಇನ್ನೀತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಿದ್ಧತೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ: ತಾಲೂಕುಮಟ್ಟದಲ್ಲಿನ ಪಶುಪಾಲನಾ ಇಲಾಖೆಯ ಅಧಿಕಾರಿಗಳು ತಹಸೀಲ್ದಾರರೊಂದಿಗೆ ಸಂಪರ್ಕದಲ್ಲಿದ್ದು ಬರ ನಿರ್ವಹಣೆಯ ಬಗ್ಗೆ ಸಮನ್ವಯ ಮಾಡಬೇಕು. ಗ್ರಾಮ, ಹೋಬಳಿ, ತಾಲೂಕುವಾರು ಮೇವಿನ ಲಭ್ಯತೆಯ ಪ್ರಮಾಣ, ಮೇವು ಖರೀದಿ ಪ್ರಕ್ರಿಯೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಭೆಯಲ್ಲಿ ಮೌಖಿಕವಾಗಿ ತಿಳಿಸಿದಾಗ ನಿರ್ಲಕ್ಷ ತೋರಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲಿ: ಬರ ನಿರ್ವಹಣೆ ಸೇರಿದಂತೆ ವಿಪತ್ತಿನಂತಹ ತುರ್ತು ಸಂದರ್ಭದಲ್ಲಿ ಕಂದಾಯ, ಪಶುಪಾಲನೆ, ಕೃಷಿ, ರೇಷ್ಮೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸಬೇಕು. ತುರ್ತು ಸಂದರ್ಭದಲ್ಲಿ ಮೇಲಧಿಕಾರಿಗಳ ಅನುಮತಿ ಪಡೆದೇ ಕೇಂದ್ರ ಸ್ಥಾನ ಬಿಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಬಿ., ವಿವಿಧ ತಾಲೂಕುಗಳ ತಹಸೀಲ್ದಾರರು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :-ಮೊಹಮ್ಮದ್ ಗೌಸ್