ಗುಂಡ್ಲವದ್ದಿಗೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ತಹಶೀಲ್ದಾರ್ ವಿಶ್ವಜೀತ ಮೇಹತ!!

0
290

ಹೊಸಪೇಟೆ ನ್ಯೂಸ್ ( ಜಾಗೃತಿ ಬೆಳಕು)

ಡಿಸಿ ನಡೆ ಹಳ್ಳಿಯ ಕಡೆ ನಿಮಿತ್ತ ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿಯಲ್ಲಿ ತಹಶೀಲ್ದಾರ ಗ್ರಾಮವಾಸ್ತವ್ಯ
ಗುಂಡ್ಲವದ್ದಿಗೇರಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ತಹಶೀಲ್ದಾರ್ ವಿಶ್ವಜೀತ ಮೇಹತ!

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಹೊಸಪೇಟೆ ತಾಲೂಕಿನ ತಹಶೀಲ್ದಾರ್ ವಿಶ್ವಜೀತ್ ಮೇಹತ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿಯ ಗುಂಡ್ಲವದ್ದಿಗೇರಿಯಲ್ಲಿ ಶನಿವಾರದಂದು ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು.
ಭೈಲೊದ್ದಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ನಾಯಕರ ಈರಮ್ಮ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಾಮಸ್ಥರು ಪಹಣಿ ತಿದ್ದುಪಡಿ, ಪಹಣಿಯಲ್ಲಿ ಹೆಸರು ಬದಲಾವಣೆ, ಮ್ಯೂಟೇಶನ್, ಸರ್ವೇ ಕೆಲಸಗಳ ವಿಳಂಬ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿತ ಅನೇಕ ವಿಷಯಗಳನ್ನು ತಹಶೀಲ್ದಾರರ ಎದುರು ಪ್ರಸ್ತಾಪಿಸಿದರು. ಈ ಕೆಲಸಗಳು ಅನೇಕ ವರ್ಷಗಳಿಂದ ಆಗುತ್ತಿಲ್ಲ; ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಗೋಳು ತೋಡಿಕೊಂಡರು.
ಇದನ್ನು ಆಲಿಸಿದ ತಹಶೀಲ್ದಾರ್ ವಿಶ್ವಜೀತ್ ಮೇಹತ ಅವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು; ಅನಗತ್ಯವಾಗಿ ಸತಾಯಿಸದಿರಿ ದಾಖಲೆಗಳು ಸರಿಯಿರದಿದ್ದರೇ ಹಿಂಬರಹ ನೀಡಿ ಅದನ್ನು ಬಿಟ್ಟು ಜನರನ್ನು ಅನಗತ್ಯ ಕಚೇರಿ ಅಲೆಸುವ ಕೆಲಸ ಮಾಡಬೇಡಿ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ;ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಇತ್ಯರ್ಥಪಡಿಸುವಂತೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಗ್ರಾಮಸ್ಥರು ಪಿಂಚಣಿ, ಪಹಣಿ, ಆಶ್ರಯ ಮನೆಗಳು ಒದಗಿಸುವಿಕೆ, ರಸ್ತೆ, ಚರಂಡಿ, ಪಡಿತರ ಚೀಟಿ ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ತಹಶೀಲ್ದಾರರ ಎದುರು ಪ್ರಸ್ತಾಪಿಸಿದರು.


ಅನೇಕ ಸಮಸ್ಯೆಗಳಿಗೆ ತಹಶೀಲ್ದಾರರು ಸ್ಥಳದಲ್ಲಿಯೇ ಬಗೆಹರಿಸಿದರು; ಉಳಿದವುಗಳನ್ನು ಹಂತಹಂತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಅಭಿಯಾನ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ವಸ್ತು ಪ್ರದರ್ಶನ ಗಮನಸೆಳೆಯಿತು.
ಇದೇ ಸಂದರ್ಭದಲ್ಲಿ ಟಿಹೆಚ್‍ಒ ಭಾಸ್ಕರ್, ಸಿಡಿಪಿಒ ಸಿಂದೂ ಯಲೆಗಾರ್ ಕಮಲಾಪುರ ಗ್ರೇಟ್-2 ತಹಶೀಲ್ದಾರ್ ಅಮರನಾಥ್, ಹೊಸಪೇಟೆಯ ಶಿರಸ್ಥೆದಾರ್‍ಗಳಾದ ರಮೇಶ್ ಹಾಗೂ ಶ್ರೀಧರ್, ಕಮಲಾಪುರ ಕಂದಾಯ ನಿರೀಕ್ಷಕ ಅನಿಲ್‍ಕುಮಾರ, ಗ್ರಾಮ ಲೆಕ್ಕಾಧಿಕಾರಿಗಳಾದ ರವಿಚಂದ್ರ, ಸುಭಾಷ್, ಮೌನೇಶ್, ಅಭೀದಾಬೇಗಂ, ಗುಂಡ್ಲವದ್ದಿಗೇರಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮೇಘ, ಗ್ರಾಮ ಸಹಾಯಕರಾದ ಬಸವರಾಜ, ಮಂಜುನಾಥ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ವರದಿ :-ಮೊಹಮ್ಮದ್ ಗೌಸ್

LEAVE A REPLY

Please enter your comment!
Please enter your name here